

ಶಂಕರ ಶರ್ಮಾ ಕುಮಟಾ
ತಾಲೂಕಿನಲ್ಲಿ ರೈತರು ವರ್ಷವಿಡೀ ಬೆವರು ಸುರಿಸಿ ಕಷ್ಟಪಟ್ಟು ಬೆಳೆದ ಬೆಳೆ ಮಂಗ, ಕಾಡುಪ್ರಾಣಿ-ಪಕ್ಷಿಗಳ ಪಾಲಾಗುತ್ತಿದ್ದರೂ ಸಂಬಂಧಪಟ್ಟ ಇಲಾಖೆಗಳಿಗೆ ರೈತರ ಮೊರೆ ಕೇಳುತ್ತಿಲ್ಲ. ಬೆಳೆ ಹಾನಿಯೂ ದೊರೆಯುತ್ತಿಲ್ಲ.
ತಾಲೂಕಿನಲ್ಲಿ ಒಟ್ಟು 58,331 ಹೆಕ್ಟೇರ್ ಭೂವಿಸ್ತೀರ್ಣದಲ್ಲಿ 39,641 ಹೆಕ್ಟೇರ್ನಷ್ಟು ಅರಣ್ಯವಿದೆ. ಕೃಷಿ ಹಾಗೂ ತೋಟಗಾರಿಕೆ ಸೇರಿ ಎಲ್ಲಾ ಬೆಳೆಗಳ ಕ್ಷೇತ್ರ 9292 ಹೆಕ್ಟೇರ್ ಇದೆ. ಇದರಲ್ಲಿ 6200 ಹೆಕ್ಟೇರ್ನಲ್ಲಿ ಅತಿಚಿಕ್ಕ ಹಿಡುವಳಿದಾರರೆ ಇದ್ದು, 10 ಹೆಕ್ಟೇರ್ ಮೇಲ್ಪಟ್ಟು ಭಾಗಾಯತ ಇರುವ ದೊಡ್ಡ ಹಿಡುವಳಿದಾರರು ಒಬ್ಬರೂ ಇಲ್ಲ. ಕ್ಷೇತ್ರದಲ್ಲಿ 1096 ಹೆಕ್ಟೇರ್ ಹಣ್ಣು ಹಂಪಲು ಬೆಳೆ ವ್ಯಾಪಿಸಿದ್ದರೆ, 83 ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ ಬೆಳೆ ಇದೆ. ಆದರೆ, ಒಟ್ಟಾರೆ ಇಳುವರಿಯ ಅರ್ಧಕ್ಕಿಂತ ಹೆಚ್ಚು ಪಾಲು ಮಂಗ, ಕಾಡುಪ್ರಾಣಿ, ಪಕ್ಷಿಗಳ ದಾಳಿಯಿಂದ ನಾಶವಾಗುತ್ತಿದೆ. ತೆಂಗು, ಬಾಳೆಗೆ ಸೀಮಿತವಾಗಿದ್ದ ಮಂಗನ ಉಪದ್ರವ ಅಡಕೆಗೂ ವ್ಯಾಪಿಸಿದ್ದು ಸಿಂಗಾರ, ಚಿಕ್ಕ ಮಿಳ್ಳೆಯನ್ನೂ ಬಿಡದೆ ಚಪ್ಪರಿಸುತ್ತಿವೆ.
ಗದ್ದೆಗಳಲ್ಲಿ ಹಂದಿ, ಮುಳ್ಳಕ್ಕಿ, ನರಿ ಮುಂತಾದವುಗಳ ಕಾಟವಾದರೆ, ತೋಟಕ್ಕೆ ಮಂಗ, ಬಾವಲಿ ಮುಂತಾದವು ದಾಳಿಯಿಡುತ್ತವೆ. ಬೆಳೆ ರಕ್ಷಣೆಗೆ ಯಾವ ಮಾಗೋಪಾಯವೂ ಇಲ್ಲದೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ರೈತನ ಪರಿಸ್ಥಿತಿಯಾಗಿದೆ. ಈ ಬಗ್ಗೆ ಹಲವಾರು ವರ್ಷಗಳಿಂದ ರೈತರು ಅರಣ್ಯ ಮತ್ತು ತೋಟಗಾರಿಕೆ ಇಲಾಖೆಗೆ ಮನವಿ ಮಾಡುತ್ತಿದ್ದರೂ ಸಮಸ್ಯೆ ನಿವಾರಣೆಗೆ ಹಾಗೂ ಪರಿಹಾರ ಒದಗಿಸುವ ಯತ್ನಗಳು ನಡೆದಿಲ್ಲ.
ಕಾಡುಪ್ರಾಣಿ ಹಾಗೂ ಮಂಗನ ಕಾಟಕ್ಕೆ ಹಾನಿಯಾದ ಬೆಳೆಗೆ ಯಾವ ಪರಿಹಾರವೂ ಸಿಗುತ್ತಿಲ್ಲ. ಅರಣ್ಯ ಇಲಾಖೆ ನಿಯಮದಲ್ಲಿ ಮರಗಿಡಗಳಿಗೆ ಬೆಲೆಯಿದೆಯೇ ಹೊರತು ಬೆಳೆಗೆ ಪರಿಹಾರವಿಲ್ಲ. ಅರಣ್ಯದಲ್ಲಿರಬೇಕಾದ ಪ್ರಾಣಿಗಳು ಊರಿನೊಳಗೆ ನುಗ್ಗುತ್ತಿರುವುದಕ್ಕೆ ಕಾರಣ ಗೊತ್ತಿದ್ದರೂ ಅರಣ್ಯ ಇಲಾಖೆ ನೆಡುತೋಪುಗಳಲ್ಲಿ ಅಕೇಶಿಯಾ ಬಿಟ್ಟು ಬೇರೆ ಗಿಡ ನೆಡುವುದಕ್ಕೆ ಪ್ರಾಶಸ್ತ್ಯ ಕೊಡುತ್ತಿಲ್ಲ. ಹಾಗೆಯೇ ತೋಟಗಾರಿಕೆ ಇಲಾಖೆಯ ಪುಡಿಗಾಸಿನ ಪರಿಹಾರವೂ ರೈತನ ನೈಜ ಸಮಸ್ಯೆ ನಿವಾರಿಸಿಲ್ಲ.
ತಜ್ಞರ ಸಮಿತಿ ರಚಿಸಿ: ಕಾಡುಪ್ರಾಣಿ ಹಾಗೂ ಮಂಗಗಳಿಂದ ಬೆಳೆ ಹಾನಿಗೆ ಸಂಬಂಧಿಸಿ ಕಳೆದ ಹಲವಾರು ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿರುವ ಕುಮಟಾದ ಎವಿಪಿ ಸೇವಾ ಸಂಸ್ಥೆ ಎಲ್ಲ ದಿಕ್ಕುಗಳಿಂದ ರೈತನ ಹಿತ ಕಾಪಾಡಲು ಪ್ರಯತ್ನಶೀಲವಾಗಿದೆ. ಮುಖ್ಯವಾಗಿ ಮಂಗಗಳ ಕಾಟ ನಿಯಂತ್ರಣಕ್ಕೆ ಬಂದರೆ ಹಾನಿಯ ಪ್ರಮಾಣ ಮುಕ್ಕಾಲುಭಾಗ ತಗ್ಗುತ್ತದೆ. ಆದ್ದರಿಂದ ಮಂಗಗಳನ್ನು ಹಿಡಿದು ಕಾಡಿಗೆ ಬಿಡುವ ಬಗ್ಗೆ ಚಿಂತನೆ ನಡೆಸಿತಾದರೂ ತೀರಾ ದುಬಾರಿ ವೆಚ್ಚ ಮತ್ತು ಅಷ್ಟೇನೂ ಪರಿಣಾಮಕಾರಿಯಲ್ಲ ಎಂಬ ಕಾರಣಕ್ಕೆ ಸಂಸ್ಥೆ ಸುಮ್ಮನಾಯಿತು. ಈ ಕುರಿತು ‘ವಿಜಯವಾಣಿ’ ಜತೆ ಅನುಭವ ಹಂಚಿಕೊಂಡರು ಎವಿಪಿ ಸೇವಾ ಸಂಸ್ಥೆಯ ಅಧ್ಯಕ್ಷ ಗಣಪತಿ ನಾಯ್ಕ. ‘ಮಂಗಗಳ ನಿಯಂತ್ರಣ ಮಾಡುವುದಾದರೂ ಹೇಗೆ ಎಂಬುದನ್ನು ಕಂಡುಹಿಡಿಯಲು ತಜ್ಞರ ಸಮಿತಿ ರಚಿಸಲು ಅಧಿಕಾರಿಗಳ ಬಳಿ ಮನವಿ ಮಾಡಿದ್ದೇವೆ. ತಜ್ಞರ ಸಮಿತಿಯಲ್ಲಿ ಅರಣ್ಯ, ತೋಟಗಾರಿಕೆ, ಕೃಷಿ, ಪಶುಸಂಗೋಪನೆ ಇಲಾಖೆಯ ತಜ್ಞರು, ವಿಜ್ಞಾನಿಗಳು, ರೈತ ಸಂಘಟನೆಗಳು, ಪ್ರಾಣಿ ದಯಾಸಂಘ, ಸಂಬಂಧಪಟ್ಟ ಎಲ್ಲ ವಿಭಾಗದ ಅನುಭವಿಗಳನ್ನು ಸೇರಿಸಿ ಸಮಿತಿ ರಚಿಸಿ ರ್ಚಚಿಸಬೇಕು. ರೈತರಿಗಾಗಿ ಕಾರ್ಯಾಗಾರ ಏರ್ಪಡಿಸಿ ಮಾಹಿತಿ ನೀಡಬೇಕು ಎಂಬ ನಮ್ಮ ಮನವಿಗೆ ಕವಡೆ ಕಾಸಿನ ಕಿಮ್ಮತ್ತೂ ದೊರೆತಿಲ್ಲ. ಬೆಳೆ ಹಾನಿಗೆ ಪರಿಹಾರವೂ ಸಿಗುತ್ತಿಲ್ಲ. ತೆಂಗು ಬೆಳೆಗಾರರ ಹಿತರಕ್ಷಣೆಗಾಗಿ ದಕ್ಷಿಣಕನ್ನಡ-ಉಡುಪಿ ಜಿಲ್ಲೆಯಂತೆ ತೆಂಗಿನಿಂದ ನೀರಾ ತೆಗೆಯಲು ಅವಕಾಶ ಕೊಡಿ ಎಂದರೂ ಸ್ಪಂದಿಸುತ್ತಿಲ್ಲ ಎಂದು ಅವರು ದೂರಿದ್ದಾರೆ.
ಕಾಡುಪ್ರಾಣಿಗಳಿಂದ ಉಂಟಾದ ರೈತನ ಬೆಳೆ ಹಾನಿಗೆ ಸಾಕಷ್ಟು ಪ್ರಕರಣಗಳಲ್ಲಿ ಅರಣ್ಯ ಇಲಾಖೆಯಿಂದ ಪರಿಹಾರ ಕೊಡಲಾಗಿದೆ. ಯಾವುದೂ ಬಾಕಿ ಇಲ್ಲ. ಆದರೆ, ಮಂಗನ ಕಾಟಕ್ಕೆ ನಮ್ಮ ಬಳಿ ಉತ್ತರವಿಲ್ಲ. ರೈತರಿಗಾಗಿ ಸದ್ಯ ಕಾಡುಪ್ರಾಣಿ ಅಥವಾ ಮಂಗನ ನಿಯಂತ್ರಣಕ್ಕೆ ತರಬೇತಿಗಳಿಲ್ಲ. | ಪ್ರವೀಣಕುಮಾರ ಬಸ್ರೂರು ಎಸಿಎಫ್
1