

ವಿರಾಜಪೇಟೆ: ಪ್ರಾಣಿಗಳನ್ನೂ ಪ್ರೀತಿಯಿಂದ ಕಾಣಬೇಕು ಎಂದು ವಿರಾಜಪೇಟೆಯ ಪಶು ವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಕೇಶ್ ಸಲಹೆ ನೀಡಿದರು.
ಅವರು ವಿರಾಜಪೇಟೆಯ ಲಿಟಲ್ ಸ್ಕಾಲರ್ಸ್ ಅಕಾಡೆಮಿ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಪ್ರಾಣಿಗಳ ದಿನಾಚರಣೆ ಹಾಗೂ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಾಣಿಗಳನ್ನು ಹಿಂಸಿಸದೆ ಅವುಗಳನ್ನು ನಾವು ಪ್ರೀತಿಯಿಂದ ಕಾಣಬೇಕು. ಅವುಗಳನ್ನು ಹಿಂಸಿಸಿದರೆ ಅವೂ ನಮಗೂ ಹಾನಿ ಮಾಡಬಲ್ಲವು ಎಂದರು.
ಮಕ್ಕಳು ತಮ್ಮ ವಿದ್ಯಾರ್ಥಿ ಹಂತದಿಂದಲೇ ಪ್ರಾಣಿಗಳ ಬಗ್ಗೆ ಅರಿವು ಹೊಂದಿರಬೇಕು. ನಾವು ಬದುಕುವುದರ ಜತೆಗೆ ಅವುಗಳನ್ನು ಬದುಕಲು ಬಿಡಬೇಕು. ಪ್ರಾಣಿಗಳ ಆರೈಕೆ ಮಾಡುವುದರ ಜತೆಗೆ ಸ್ವಚ್ಛತೆ ಕಾಪಾಡಿದರೆ ರೋಗಗಳಿಂದ ರಕ್ಷಿಸಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಪೂಜಾ ಸಜೇಶ್ ಮಾತನಾಡಿ, ಮಕ್ಕಳಿಗೆ ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ಪಾಲಕರೂ ವಿವಿಧ ಸಾಕುಪ್ರಾಣಿಗಳನ್ನು ಕರೆತಂದು ಸಹಕಾರ ನೀಡಿರುತ್ತಾರೆ. ಮಕ್ಕಳಿಗೆ ಜವಾಬ್ದಾರಿ ಅರಿವು ಮೂಡಬೇಕು. ಪ್ರಾಣಿಗಳ ಭಾವನೆಗಳು ಅರ್ಥವಾಗಬೇಕು. ಪ್ರಾಣಿಗಳನ್ನು ನಮ್ಮ ಒಡನಾಡಿಗಳು ಎಂದು ಭಾವಿಸಿ ಅವುಗಳಿಗೆ ಹಾನಿಯಾಗದಂತೆ ಸಾಕಬೇಕು ಎಂದರು.
ವಿದ್ಯಾರ್ಥಿಗಳು ಹಾಗೂ ಪಾಲಕರು ವಿವಿಧ ಸಾಕುಪ್ರಾಣಿಗಳನ್ನು ಶಾಲೆಯ ಆವರಣಕ್ಕೆ ಕರೆತಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಮುಖಂಡ ತಾತಂಡ ತಿಮ್ಮಣ್ಣ, ಶಾಲಾ ಕಾರ್ಯದರ್ಶಿ ಪ್ರತಿಮಾ ರಂಜನ್, ಮುಖ್ಯ ಶಿಕ್ಷಕಿ ಮೀರಾ ಪೂಣಚ್ಚ, ಸಹ ಶಿಕ್ಷಕರು, ಸಿಬ್ಬಂದಿ ಹಾಗೂ ಮಕ್ಕಳು ಹಾಜರಿದ್ದರು.