

ಬಾಗಲಕೋಟೆ: ಕೆಎಸ್ ಆರ್ ಟಿಸಿ ಬಸ್ ಹಾಗೂ ಸ್ಕೂಲ್ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಘಟನೆ ಜಿಲ್ಲೆಯ ಇಳಕಲ್ಲ ನಗರದ ಬಸವೇಶ್ವರ ವೃತ್ತದಲ್ಲಿ ಗುರುವಾರ ನಡೆದಿದ್ದು, ಅದೃಷ್ಟವಶಾತ್ ಶಾಲಾ ಮಕ್ಕಳು, ಪ್ರಯಾಣಿಕರು ಯಾವುದೇ ಅಪಾಯ ಇಲ್ಲದೇ ಪಾರಾಗಿದ್ದಾರೆ.
ನಗರದ ಪ್ರೇರಣಾ ಖಾಸಗಿ ಶಾಲೆಯ ಬಸ್ ನಲ್ಲಿ ವಿದ್ಯಾರ್ಥಿಗಳನ್ನು ಶಾಲೆಯಿಂದ ಮನೆಗೆ ಕಳುಹಿಸುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಬಸವೇಶ್ವರ ವೃತ್ತದಲ್ಲಿ ಬಸ್ ಹೊರಟಿದ್ದ ವೇಳೆ ಎದುರಿಗೆ ಬಂದ ತಾಳಿಕೋಟಿ ಮಾರ್ಗದ ಕೆಎಸ್ ಆರ್ ಟಿಸಿ ಬಸ್ ಮುಖಾಮುಖಿಯಾಗಿದೆ.
ಎರಡು ಬಸ್ ಗಳು ಡಿಕ್ಕಿ ಹೊಡೆಯುತ್ತಿದ್ದಂತೆ ಗಾಬರಿಬಿದ್ದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು ಬಸ್ ನಿಂದ ಕೆಳಗೆ ಇಳಿದಿದ್ದಾರೆ. ಯಾರಿಗೂ ತೊಂದರೆ ಆಗಿಲ್ಲವಾದರೂ ಎರಡು ಬಸ್ ಗಳ ಮುಂಭಾಗದ ಗಾಜುಗಳು ಜಖಂಗೊಂಡಿವೆ. ಸ್ವಲ್ಪ ಹೊತ್ತಿನ ಬಳಿಕ ವಿದ್ಯಾರ್ಥಿಗಳ ಮತ್ತೆ ವಾಹನದಲ್ಲಿ ಮನೆಗೆ ಕಳುಹಿಸಲಾಯಿತು. ಮತ್ತೊಂದೆಡೆ ಪ್ರಯಾಣಿಕರನ್ನು ಬೇರೆ ಬಸ್ ನಲ್ಲಿ ಕಳುಹಿಸಲಾಯಿತು. ಸ್ಥಳಕ್ಕೆ ಇಳಕಲ್ಲ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.