

ಕನಕಪುರ : ನಾಡಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಶೋಷಣೆ, ಅನ್ಯಾಯವನ್ನು ಯುವ ಜನಾಂಗ ಪ್ರಶ್ನಿಸಬೇಕು. ಆಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ರಾಜ್ಯ ರೈತ ಸಂಘ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ನಗರ ಅಂಬೇಡ್ಕರ್ ಭವನದಲ್ಲಿ ಶನಿವಾರ ರೈತ ಸಂಘ ಹಮ್ಮಿಕೊಂಡಿದ್ದ ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ 89ನೇ ನೆನಪು, ವಿಚಾರಗೋಷ್ಠಿ ಮತ್ತು ಜಿಲ್ಲಾ ಯುವಕ ಘಟಕದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಸಮುದಾಯ ಹಾಗೂ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಯುವ ಜನರ ಪಾತ್ರ ಮಹತ್ತರವಾಗಿದೆ. ಅನ್ಯಾಯದ ವಿರುದ್ಧ ಹೋರಾಟ ಮಾಡುವ ಮನೋಭಾವ ಯುವ ಜನತೆ ಬೆಳೆಸಿಕೊಳ್ಳಬೇಕು. ಈ ಮೂಲಕ ದೇಶದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಶೋಷಣೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದರು.
ಎಂ.ಡಿ.ನಂಜುಂಡಸ್ವಾಮಿ ಅವರು ಜನಹಿತ ಕಾಪಾಡುವ ನಿಟ್ಟಿನಲ್ಲಿ, ನ್ಯಾಯ ಸಮಾನತೆಗಾಗಿ ದುಡಿಯಬೇಕು. ಆ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ರೈತ ಹೋರಾಟಕ್ಕೆ ಧುಮುಕಿದರು.
ಮೂರು ದಶಕಗಳ ಹಿಂದೆ ಜನ, ರೈತ ವಿರೋಧಿ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಾ, ಸಮಾಜದ ಬದಲಾವಣೆ ಕಂಡವರಾಗಿದ್ದರು. ಬಹುಜನರ ಹಿತಕ್ಕಾಗಿ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ನಿಸ್ವಾರ್ಥ ಸೇವೆ ಸಲ್ಲಿಸಿ ವಿಶ್ವ ರೈತ ಮಾನವನಾಗಿ ಕಂಗೊಳಿಸುತ್ತಿದ್ದಾರೆ. ನಂತರದ ದಿನಗಳಲ್ಲಿ ಕೃಷಿ ತನ್ನ ಅಸ್ಮಿತೆ ಕಳೆದುಕೊಳ್ಳುತ್ತಿದೆ. ಹಲವು ವರ್ಷಗಳಿಂದ ರೈತ ಸಂಕುಲ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಇದಕ್ಕೆ ಏನು ಕಾರಣ ಎಂಬುವುದನ್ನು ಕಂಡುಕೊಳ್ಳಬೇಕಾಗಿದೆ ಎಂದರು.
ಆರ್‌ಇಎಸ್ ಸಂಸ್ಥೆಯ ಅಧ್ಯಕ್ಷ ಎಚ್.ಕೆ.ಶ್ರೀಕಂಠು ಮಾತನಾಡಿ, ಎಂ.ಡಿ. ನಂಜುಂಡಸ್ವಾಮಿ ಅವರ ಹೋರಾಟದ ಹಾದಿಗಳು ಸಮಾಜವನ್ನು ಬಡಿದೆಬ್ಬಿಸುವ ಕೆಲಸ ಮಾಡಿತ್ತು. ಜನವಿರೋಧಿ ಸರ್ಕಾರಗಳನ್ನು ಬದಲಾವಣೆ ಮಾಡುವ ಹೋರಾಟಗಳು ನಡೆಯುತ್ತಿತ್ತು. ಇಂದು ಹೋರಾಟಗಳು ಕವಲು ದಾರಿ ಹಿಡಿದು ಚಳವಳಿಗೆ ಹಿನ್ನಡೆಯಾಗುತ್ತಿದೆ. ಇದರಿಂದ ರಾಜಕಾರಣಿಗಳು, ಅಧಿಕಾರಿಗಳಿಗೆ ಭಯವಿಲ್ಲದಂತಾಗಿದೆ ಎಂದರು.
ಜಾನಪದ ಸೋಬಾನ ಕೆಲಸದಲ್ಲಿ 40 ವರ್ಷ ಸೇವೆ ಸಲ್ಲಿಸಿದ ಮಹಿಳೆಯರನ್ನು ಸನ್ಮಾನಿಸಲಾಯಿತು. ಈ ವೇಳೆ ಕೃಷಿ ಮೇಳ ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ನಗರದಲ್ಲಿ ನಂಜುಂಡಸ್ವಾಮಿ ಅವರ ಭಾವಚಿತ್ರವನ್ನು ಜಾನಪದ ಕಲಾ ಮೇಳಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ತಾಲೂಕು ಅಧ್ಯಕ್ಷ ಮುನಿಸಿದ್ದೇಗೌಡ, ಹಾರೋಹಳ್ಳಿ ಬಸವರಾಜು, ಮಾಗಡಿ ಲೋಕೇಶ್, ರಾಮನಗರ ನಾಗರಾಜು, ಚನ್ನಪಟ್ಟಣ ರಾಮೇಗೌಡ, ಸಂಘದ ಪದಾಧಿಕಾರಿಗಳು, ರೈತರು, ಮಹಿಳೆಯರು ಇದ್ದರು.