

ಬಾಗಲಕೋಟೆ: ಪ್ರವಾಹ ಸಂದರ್ಭದಲ್ಲಿ ಜನರ ರಕ್ಷಣೆಗಾಗಿ ಕೈಗೊಳ್ಳಬೇಕಾಗಿರುವ ಮುನ್ನಚ್ಚರಿಕೆ ಕ್ರಮಗಳು, ವಿಪತ್ತು ನಿರ್ವಹಣೆ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಮೂರು ಕಡೆಗಳಲ್ಲಿ ಶನಿವಾರ ಅಣಕು ಪ್ರದರ್ಶನ ನಡೆಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಅಗ್ನಿಶಾಮಕದಳ, ಗೃಹರಕ್ಷಕ ದಳ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಬದಾಮಿಯ ಅಗಸ್ತ್ಯ ತೀರ್ಥ ಹೊಂಡ, ಮುಧೋಳ ತಾಲೂಕಿನ ಯಾದವಾಡ ಸೇತುವೆ ಹಾಗೂ ಜಮಖಂಡಿ ತಾಲೂಕಿನ ಸೂರಪಾಲಿಯಲ್ಲಿ ಪ್ರವಾಹ ರಕ್ಷಣಾ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದ್ದು, ಅಣಕು ಪ್ರದರ್ಶನದಲ್ಲಿ ಎದುರಾಗುವ ವಿಪತ್ತು, ಅಪಾಯಕ್ಕೆ ಸಿಲುಕಿರುವ ಜನರ ರಕ್ಷಣೆ ಮಾಡುವ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆ ನಡೆಸಲಾಯಿತು.
ನದಿಯಲ್ಲಿ ಸಿಲುಕಿರುವ ಜನರನ್ನು ರಕ್ಷಿಸಿ ನದಿಯಿಂದ ಹೊರ ತಂದು ಪ್ರಥಮ ಚಿಕಿತ್ಸೆ ನೀಡುವುದು ಮತ್ತು ಅಲ್ಲಿಂದ ಆಸ್ಪತ್ರೆಗೆ ಕಳುಹಿಸುವ ಸನ್ನಿವೇಶವನ್ನು ಪ್ರದರ್ಶಿಸಲಾಯಿತು. ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿ ವ್ಯಕ್ತಿ ಮುಳುಗುತ್ತಿರುವ ಸಮಯದಲ್ಲಿ ಅಗ್ನಿಶಾಮಕ ಸಿಬ್ಬಂದಿ ದೋಣಿಯಲ್ಲಿ ರಕ್ಷಣೆ ಮಾಡುವ ಪ್ರಾತ್ಯಕ್ಷಿಕೆ ಎಲ್ಲರ ಗಮನ ಸೆಳೆಯಿತು. ನಂತರ ಸಿದ್ದರಾಮೇಶ್ವರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ತೆರಳಿ ಅಲ್ಲಿ ಜನರಿಗೆ ವಾಸ್ತವ್ಯ, ಊಟದ ವ್ಯವಸ್ಥೆ, ಔಷಧ ವಿತರಣೆ ಹಾಗೂ ಬ್ಲಾಂಕೇಟ್ ಪೂರೈಸುತ್ತಿರುವ ಹಾಗೂ ಜಿಲ್ಲಾಡಳಿತ ಕೈಗೊಂಡ ಎಲ್ಲ ವ್ಯವಸ್ಥೆಯ ಬಗ್ಗೆ ಅಣಕು ಪ್ರದರ್ಶನ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಂಗಪ್ಪ ಅವರು ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ನಿರ್ವಹಣೆಗೆ ಎಲ್ಲ ರೀತಿಯಲ್ಲಿ ಸಿದ್ದತೆ ಮಾಡಿಕೊಂಡಿದೆ. ಎಲ್ಲ ರೀತಿಯಿಂದ ಜಿಲ್ಲಾಡಳಿತ ಸನ್ನದ್ದವಾಗಿದ್ದು, ಪೊಲೀಸ್ ಹಾಗೂ ಅಗ್ನಿಶಾಮಕ ದಳ ಕಾರ್ಯಾಚರಣೆ ಸಜ್ಜುಗೊಂಡಿದ್ದಾರೆ. ಜನರು ಪ್ರವಾಹ ಪರಿಸ್ಥಿತಿಯಲ್ಲಿ ನೀರಿಗೆ ಇಳಿಯುವುದು, ನೀರಿನ ಜೊತೆ ದುಸ್ಸಾಹಸಕ್ಕೆ ಕೈಹಾಕುವುದು ಮಾಡಬಾರದು. ಜಿಲ್ಲಾಡಳಿತಕ್ಕೆ ಸ್ಪಂದಿಸುವ ಕಾರ್ಯವಾಗಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ ಜಿಲ್ಲೆಯಲ್ಲಿ ಪ್ರವಾಹ ಉಂಟಾಗುವ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಯ ಪಾತ್ರಯದಲ್ಲಿ ಪ್ರವಾಹ ಉಂಟಾದಾಗ ರಕ್ಷಣೆ ಕಾರ್ಯಾಚಾರಣೆ ಅಣಕು ಪ್ರದರ್ಶನ ನಡೆಸಲಾಗುತ್ತಿದೆ. ಎಲ್ಲೆಲ್ಲಿ ಪ್ರವಾಹ ಉಂಟಾಗುತ್ತದೆ. ಎಷ್ಟು ಸೇತುವೆಗಳು ಮುಳುಗಡೆಯಾಗುತ್ತವೆ ಎಂಬುದನ್ನು ಗುರುತಿಸಿಕೊಂಡು ಆ ವ್ಯಾಪ್ತಿಯಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಲಾಗುತ್ತಿದೆ. ಪ್ರವಾಹ ನಿರ್ವಹಣೆಗೆ ಮುಂಜಾಗ್ರತವಾಗಿ ಜಿಲ್ಲಾಡಳಿತ ಜಾಗೃತಿ ಮೂಡಿಸುತ್ತಿದೆ ಎಂದರು.
ಅಣಕು ಪ್ರದರ್ಶನ ಕಾರ್ಯದಲ್ಲಿ ಮುಧೋಳ ನಗರಸಭೆÉ ಅಧ್ಯಕ್ಷೆ ಸುನಂದ ತೇಲಿ, ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಶೀಲ್ದಾರ ಸನಮೋರೆ, ಜಮಖಂಡಿ ಡಿವಾಯ್‍ಎಸ್‍ಪಿ ಮಹಮ್ಮದ ರೋಷನ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ ಸಿದ್ನಾಳ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ ಸೇರಿದಂತೆ ಇತರರು ಉಪಸ್ಥಿತರಿದ್ದರು.