

ಬಾಗಲಕೋಟೆ: ಜಿಲ್ಲೆಯ ವಿವಿಧ ಜಲಾಶಯಗಳ ನೀರಿನ ಮಟ್ಟ ಹೆಚ್ಚಳವಾಗುತ್ತಿರುವ ಹಿನ್ನಲೆಯಲ್ಲಿ ಬಾಗಲಕೋಟೆ ಹಾಗೂ ಹುನಗುಂದ ತಾಲೂಕಿನ ಪ್ರವಾಹ ಬಾದಿತ ಗ್ರಾಮಗಳಿಗೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಭೇಟಿ ನೀಡಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಪರಿಶೀಲಿಸಿದರು.
ಸೋಮವಾರ ಬಾಗಲಕೋಟೆ ತಾಲೂಕಿನ ಪ್ರವಾಹ ಬಾದಿತ ಗ್ರಾಮಗಳಾದ ರಾಂಪೂರ, ನಾಯನೇಗಲಿ, ಮಂಕಣಿ, ಡೊಮನಾಳ ಹಾಗೂ ಚಿಕ್ಕಮ್ಯಾಗೇರಿ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಬೀತಿಯ ಸ್ಥಿತಿಗತಿಯ ಬಗ್ಗೆ ಪರಿಶೀಲನೆ ನಡೆಸಿದರು. ಹಿಪ್ಪರಗಿ ಮತ್ತು ಆಲಮಟ್ಟಿ ಜಲಾಶಯದ ಒಳ ಹರಿವಿನ ಮಟ್ಟ ಹೆಚ್ಚಾಗುತ್ತಿದೆ. ಈ ಪ್ರಮಾಣ ಹಂತ ಹಂತವಾಗಿ ಹೆಚ್ಚಾದಲ್ಲಿ ಪ್ರವಾಹ ಬೀತಿ ಉಂಟಾಗಲಿದೆ. ಈ ಹಿನ್ನಲೆಯಲ್ಲಿ ಗ್ರಾಮಸ್ಥರಿಗೆ ಮುಂಜಾಗ್ರತವಾಗಿ ಸ್ಥಳಕ್ಕೆ ತೆರಳಲು ಮನವಿ ಮಾಡಿಕೊಂಡರು.
ಪ್ರವಾಹ ಬೀತಿ ಹಿನ್ನಲೆಯಲ್ಲಿ ಬಾದಿತ ಗ್ರಾಮಗಳಲ್ಲಿ ಜಿಲ್ಲಾಡಳಿತದಿಂದ ಕೈಗೊಂಡ ಮುಂಜಾಗ್ರತಾ ಕ್ರಮ ಹಾಗೂ ಕಾಳಜಿ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ದತೆಯನ್ನು ಪರಿಶೀಲಿಸಿದರು. ಪ್ರವಾಹ ಉಂಟಾದಲ್ಲಿ ಅಧಿಕಾರಿಗಳು ಮುಂಜಾಗ್ರತಾವಾಗಿ ಗ್ರಾಮಸ್ಥರ ಸ್ಥಳಾಂತರಕ್ಕೆ ಎಲ್ಲ ರೀತಿಯ ಸಿದ್ದತೆ ಕೈಗೊಳ್ಳಲು ಸೂಚಿಸಿದರು. ತಾವು ಕೈಗೊಂಡ ಸಿದ್ದತೆ ಬಗ್ಗೆ ಗ್ರಾಮಸ್ಥರಿಗೆ ಮಾಹಿತಿ ನೀಡುವ ಕೆಲಸವಾಗಬೇಕೆಂದು ಅಧಿಕಾರಿಗಳಿಗೆ ತಿಳಿಸಿದರು. ಮಂಕಣಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳಿಗೆ ನೀಡುತ್ತಿರುವ ಬಿಸಿ ಊಟದ ಕೊಠಡಿಗೆ ತೆರಳಿ ಪರಿಶೀಲಿಸಿದರು.
ಆಲಮಟ್ಟಿ ಜಲಾಶಯದಿಂದ 1.50 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರಬಿಡುತ್ತಿದ್ದಾರೆ. ಈ ಪ್ರಮಾಣ 2.50 ಕ್ಯೂಸೆಕ್ಸ್ ಆದಲ್ಲಿ ಪ್ರವಾಹ ಉಂಟಾಗುತ್ತಿದ್ದು, ಹುನಗುಂದ ತಾಲೂಕಿನ ಬಾದಿತಗೊಳ್ಳುವ ಕಡಗೂರು, ತುರಡಿಹಾಳ, ಬಿಸಲದಿನ್ನಿ, ವಳಕಲದಿನ್ನಿ, ಕೂಡಲಸಂಗಮ ಗ್ರಾಮಗಳಿಗೆ ಸಹ ಜಿಲ್ಲಾಧಿಕಾರಿಗಳು ಬೇಟಿ ನೀಡಿ ಪರಿಸ್ಥಿತಿಯ ಪರಿಶೀಲಿಸಿದರು. ಕೆಂಗಲ್ ಕಡಪಟ್ಟಿ ಶಾಲೆಗೆ ಬೇಟಿ ನೀಡಿ ಪರಿಶೀಲಿಸಿದರು. ನಂತರ ವಡಗಗೋಡದಿನ್ನಿ, ಹೂವನೂರು, ನಂದನೂರು, ಹಂಜಿಹಾಳ, ಚಿಕ್ಕಮಳಗಾವಿ, ಚಿಕ್ಕಮಾಗಿ, ಹಿರೇಮಾಗಿ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಭೇಟಿ ಸಮಯದಲ್ಲಿ ಬಾಗಲಕೋಟೆ ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಶೀಲ್ದಾರರಾದ ಅಮರೇಶ ಪಮ್ಮಾರ, ನಿಂಗಪ್ಪ ಬಿರಾದಾರ, ಕಂದಾಯ ನಿರೀಕ್ಷಕ ಡಿ.ಎಸ್.ಯತ್ನಟ್ಟಿ, ಕಮತಗಿ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಎಚ್.ಎಫ್.ಹುಲ್ಲಿಕೇರಿ ಸೇರಿದಂತೆ ಇತರರು ಇದ್ದರು.