ಪ್ರವಾಹ ಬಾದಿತ 203 ಗ್ರಾಮಗಳ ಮೇಲೆ ನಿಗಾ

bkt-18-1
Published on

ಬಾಗಲಕೋಟೆ: ವಿವಿಧ ಜಲಾಶಯಗಳ ನೀರಿನ ಮಟ್ಟ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇರುವದರಿಂದ ಬಾದಿತ ಗ್ರಾಮಗಳ ಮೇಲೆ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಜರುಗಿದ ಬರ ಮತ್ತು ಮುಂಗಾರು ಪೂರ್ವ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಮಳೆಯ ಅಬ್ಬರಕ್ಕೆ ಹವಾಮಾನ ಇಲಾಖೆ ಈಗಾಗಲೇ ರಾಜ್ಯದ 6 ಜಿಲ್ಲೆಗಳಿಗೆ ರೆಡ್ ಅಲರ್ಟ ಘೋಷಿಸಿದ್ದು, ಅಲ್ಲಿನ ಪರಿಸ್ಥಿತಿಯ ಪಾಠ ಕಲಿಯಬೇಕಿದೆ. ಜಿಲ್ಲೆಯಲ್ಲಿ ಮಳೆ ಆಗದಿದ್ದರೂ ಕೂಡಾ ಮಹಾರಾಷ್ಟ್ರದಲ್ಲಿ ಸುರಿವ ಮಳೆಯಿಂದ ಪ್ರವಾಹ ಉಂಟಾಗುತ್ತದೆ. ಪ್ರವಾಹ ನಿರ್ವಹಣೆಗೆ ಎಷ್ಟು ಸನ್ನದ್ದರಾದರೂ ಸಾಲದು ಪ್ರವಾಹ ಬಾದಿತ ಗ್ರಾಮಗಳ ಮೇಲೆ ಸೂಕ್ಷ್ಮ ನಿಗಾ ವಹಿಸುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಕೃಷ್ಣಾ ಮತ್ತು ಮಲಪ್ರಭಾ ನದಿ ಹರಿವಿನ ಪ್ರಮಾಣ 2 ಲಕ್ಷ ಕ್ಯೂಸೆಕ್ಸ್‍ವರೆಗೆ ಹೆಚ್ಚಾದಲ್ಲಿ ಮುಖ್ಯವಾಗಿ ಜಮಖಂಡಿ ತಾಲೂಕಿನ ಮುತ್ತೂರು, ಕಂಕಣವಾಡಿ, ತುಬಚಿ, ಆಲಗೂರ, ಚಿಕ್ಕಪಡಸಲಗಿ, ಮುಧೋಳ ತಾಲೂಕಿನ ಉತ್ತೂರು, ಡವಳೇಶ್ವರ, ಮಿರ್ಜಿ, ಚನಾಳ, ನಂದಗಾವ ಗ್ರಾಮಗಳಲ್ಲಿ ಪ್ರವಾಹ ಉಂಟಾಗುತ್ತಿದ್ದು, ಈ ಪ್ರದೇಶದಲ್ಲಿ ಆಯಾ ತಾಲೂಕಿನ ತಹಶೀಲ್ದಾರರು ಆಗಾಗ್ಗೆ ಭೇಟಿ ನೀಡಿ ಅಲ್ಲಿಯ ಪರಿಸ್ಥಿತಿ ಅರಿಯುವ ಅಗತ್ಯವಿದೆ. ಅಲ್ಲದೇ ಮುಂಜಾಗ್ರತವಾಗಿ ಕೈಗೊಂಡ ಸಿದ್ದತೆ ಬಗ್ಗೆ ಅಲ್ಲಿಯ ಗ್ರಾಮಸ್ಥರಿಗೆ ತಿಳಿಸುವ ಕೆಲಸವಾಗಬೇಕು ಎಂದರು.

ಮಲಪ್ರಭಾ ನದಿಯಿಂದ 32 ಸಾವಿರ ಕ್ಯೂಸೆಕ್ಸ್ ನೀರು ಬಂದರೂ ಸಹ ಬಾದಿತ ಗ್ರಾಮಗಳಲ್ಲಿ ಹೆಚ್ಚಿನ ನಿಗಾವಹಿಸಿ ವಹಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು ಪ್ರವಾಹ ನಿಯಂತ್ರಣ ಕಾರ್ಯದಲ್ಲಿ ಎಲ್ಲ ಇಲಾಖೆಯ ಬಾಗಿತ್ವ ಮುಖ್ಯವಾಗಿದೆ. ಲೋಕೋಪಯೋಗಿ ಹಾಗೂ ಹೆಸ್ಕಾಂ ಇಲಾಖೆಯವರು ಎಲ್ಲಿ ಸಮಸ್ಯೆಯಾಗುತ್ತದೆ ಆ ಪ್ರದೇಶಗಳಲ್ಲಿ 2 ರಿಂದ 3 ದಿನ ಪೀಲ್ಡಗೆ ಹೋಗಿ ಮಾಹಿತಿ ಕಲೆ ಹಾಕಬೇಕು. ಬಾದಿತಗೊಳ್ಳುವ ಪ್ರತಿ ಗ್ರಾಮಕ್ಕೂ ಓರ್ವ ನೋಡಲ್ ಅಧಿಕಾರಿಯನ್ನು ನೇಮಿಸಿ ಪ್ರವಾಹದ ಬಗ್ಗೆ ನಿಗಾ ವಹಿಸುವ ಕಾರ್ಯವಾಗಬೇಕು. ಇದರ ಜೊತೆಗೆ ಅಗತ್ಯ ಮೈಕ್ರೋ ಪ್ಲಾನ್ ಸಹ ಮಾಡಲು ಸೂಚಿಸಿದರು.

ಮಳೆಯಿಂದಾಗು ಮನೆ, ಬೆಳೆ ಹಾನಿ ಮಾಹಿತಿ ಪಡೆಯಲು ತಂಡ ರಚನೆ ಮಾಡಬೇಕು. ಕೇಳಿದಾಗ ತಕ್ಷಣ ಅಂದಾಜು ಮಾಹಿತಿ ನೀಡುವಂತಾಗಬೇಕು. ಲಭ್ಯವಿರುವ ಸಂಪನ್ಮೂಲ ಬಳಸಿ ಖಚಿತವಾಗಿ ಹಾನಿ ವಿವರ ಪಡೆಯುವ ಕಾರ್ಯ ಸನ್ನದ್ದರಾಗಿರಬೇಕು. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಶಿಕ್ಷಣ ಇಲಾಖೆಯವರು ಅಗತ್ಯ ಕಾಳಜಿ ಕೇಂದ್ರ ಸಿದ್ದವಾಗಿಟ್ಟುಕೊಂಡ ಬಗ್ಗೆ ಮಾಹಿತಿ ನೀಡಬೇಕು. ಜಾನುವಾರು ಅಗತ್ಯ ಮೇವಿನ ಲಭ್ಯತೆ ಬಗ್ಗೆ ಮಾಹಿತಿ ನೀಡಲು ತಿಳಿಸಿ ಪ್ರವಾಹ ನಿರ್ವಹಣೆಗೆ ಕೈಗೊಂಡ ಸಿದ್ದತೆ ಬಗ್ಗೆ ಒಂದು ಬಾರಿ ತಾಲೀಮು ಮಾಡಲು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಎನ್.ವಾಯ್.ಬಸರಿಗಿಡದ, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ ಸೇರಿದಂತೆ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, ಆಯಾ ತಾಲೂಕಿನ ತಹಶೀಲ್ದಾರರು, ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net