ಪ್ರವಾಸೋದ್ಯಮದಲ್ಲಿ ಪಕ್ಷಿ ವೀಕ್ಷಣೆಗೆ ಮಹತ್ವದ ಸ್ಥಾನವಿರಲಿ

14SIRSI1
Published on

ಶಿರಸಿ: ಪ್ರವಾಸೋದ್ಯಮ ವ್ಯವಸ್ಥೆಯಲ್ಲಿ ಪಕ್ಷಿ ವೀಕ್ಷಣೆಗೆ ಮಹತ್ವದ ಸ್ಥಾನ ನೀಡಬೇಕು ಎಂದು ರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಅಶೀಸರ ಹೇಳಿದರು.

ತಾಲೂಕಿನ ಕೈಲಾಸಗುಡ್ಡದಲ್ಲಿ ಶನಿವಾರ ಏರ್ಪಡಿಸಿದ್ದ ಪಕ್ಷಿ ಅಧ್ಯಯನ ಶಿಬಿರ ಉದ್ಘಾಟಿಸಿ, ಬಳಿಕ ಏರ್ಪಡಿಸಿದ್ದ ತಜ್ಞರ ಸಂವಾದದಲ್ಲಿ ಅವರು ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆ ಪಕ್ಷಿ ಸಂಕುಲದಲ್ಲಿ ಸಮೃದ್ಧಿ ಹೊಂದಿದೆ. ಇಲ್ಲಿ ಸಾಕಷ್ಟು ಪಕ್ಷಿಧಾಮಗಳಿವೆ. ಪಕ್ಷಿ ವೈವಿಧ್ಯತೆಯಿದೆ. ಇವುಗಳನ್ನು ಪ್ರವಾಸೋದ್ಯಮದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶಾಲ್ಮಲಾ, ಬೇಡ್ತಿ, ಸಂರಕ್ಷಿತ ಪ್ರದೇಶ ನಿರ್ವಹಣೆ ಸಮಿತಿ ರಚಿಸಬೇಕು. ಬೇಡ್ತಿ- ಅಘನಾಶಿನಿ ಕಣಿವೆಗಳ ನಿರ್ವಹಣೆ ಯೋಜನೆ ತಯಾರಿಸಬೇಕು. ಪಕ್ಷಿಧಾಮಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಪಕ್ಷಿಗಳ ಆವಾಸ ಸ್ಥಾನ ಕೆರೆ, ಕಾನು, ದೇವರಕಾನು, ಜಡ್ಡಿಗಳ ಉಳಿವು ಮುಖ್ಯ ಎಂದರು.

ಅರಣ್ಯ ಕಾಲೇಜ್ ಪ್ರಾಧ್ಯಾಪಕ ಶ್ರೀಧರ ಭಟ್ಟ ಮಾತನಾಡಿ, ಪಕ್ಷಿ ಅಧ್ಯಯನದಲ್ಲಿ ಅರಣ್ಯ ಕಾಲೇಜ್ ವಿದ್ಯಾರ್ಥಿಗಳು ತೊಡಗಿದ್ದಾರೆ. ಜೀವವೈವಿಧ್ಯ ದಾಖಲಾತಿ ವರದಿಗಳಲ್ಲಿ ಪಕ್ಷಿ ವೈವಿಧ್ಯತೆ ಸೇರಿದೆ ಎಂದರು.

ವನ್ಯಜೀವಿ ತಜ್ಞ ಬಾಲಚಂದ್ರ ಸಾಯಿಮನೆ ಮಾತನಾಡಿ, ದೇವರ ಕಾಡುಗಳು ಪಕ್ಷಿಗಳ ಉಳಿವಿಗೆ ಮಹತ್ವದ ಕೊಡುಗೆ ನೀಡುತ್ತವೆ ಎಂದರು.

ಡಿಎಫ್​ಒ ಎಸ್.ಜಿ. ಹೆಗಡೆ, 7ನೇ ತರಗತಿ ವಿದ್ಯಾರ್ಥಿನಿ ಪೂಜಾ, ಪುಣೆಯಲ್ಲಿ ಅರ್ಥಶಾಸ್ತ್ರ ಸಲಹೆಗಾರರಾಗಿರುವ ವನಿತಾ ಅಶೀಸರ ಮಾತನಾಡಿದರು. ಪಕ್ಷಿ ಸಮೀಕ್ಷಕ ಓಂಕಾರ ಪೈ, ಅತ್ತೀವೇರಿ ಮಹೇಶ, ವಲಯ ಅಧಿಕಾರಿಗಳಾದ ಬಸವರಾಜ, ಮಂಜುನಾಥ, ಸೋಂದಾದ ರತ್ನಾಕರ ಬಾಡಲಕೊಪ್ಪ ಮುಂತಾದವರು ಅನುಭವ ಹಂಚಿಕೊಂಡರು.

ವಿ.ಎಫ್.ಸಿ. ಅಧ್ಯಕ್ಷ ವಿಶ್ವನಾಥ ಬುಗಡಿಮನೆ ಅಧ್ಯಕ್ಷತೆ ವಹಿಸಿದ್ದರು. ಗಣಪತಿ ಕೆ. ಬಿಸಲಕೊಪ್ಪ ಸ್ವಾಗತಿಸಿದರು. ಪಕ್ಷಿತಜ್ಞರು, ವನ್ಯಜೀವಿ ಕಾರ್ಯಕರ್ತರ ತಂಡವು ತಾಲೂಕಿನ ಕೈಲಾಸಗುಡ್ಡದಿಂದ ಗುಡವಿ ಪಕ್ಷಿಧಾಮದವರೆಗೆ ಪಕ್ಷಿ ವೈವಿಧ್ಯ ಅಧ್ಯಯನ ಪ್ರವಾಸ ನಡೆಸಿತು.

ಅಗಸಾಲ ಬೊಮ್ಮನಳ್ಳಿ ಗ್ರಾಮ ಅರಣ್ಯ ಸಮಿತಿ, ಅರಣ್ಯ ಇಲಾಖೆ, ವೃಕ್ಷಲಕ್ಷ ಆಂದೋಲನಗಳ ಆಶ್ರಯದಲ್ಲಿ ಏರ್ಪಡಿಸಿದ ಪಕ್ಷಿ ಪ್ರವಾಸವು ಕೈಲಾಸ ಗುಡ್ಡದ ಬುಡದ ಬೊಮ್ಮನಳ್ಳಿ, ಅಶೀಸರ, ಕಾಳಿಸರ, ಗಡಿಗೆಹೊಳೆ, ಅಡವಿಗಲ್ಲದ ಮನೆ ಬೆಟ್ಟ, ಅರಣ್ಯಗಳಲ್ಲಿ ನಡೆಯಿತು.

42 ಜಾತಿಗಳ ವಿವಿಧ ಪಕ್ಷಿ ಸಂಕುಲಗಳ ಆವಾಸವನ್ನು ಗುರುತಿಸಲಾಯಿತು. ನಂತರ ಗುಡ್ನಾಪುರ ಕೆರೆ, ಬನವಾಸಿ, ಸಮೀಪದ ಕೆರೆ ಪರಿಸರದಲ್ಲಿ ಪಕ್ಷಿ ವೀಕ್ಷಣೆ ಮಾಡಿದ ತಂಡ ಗುಡವಿ ಪಕ್ಷಿಧಾಮಕ್ಕೆ ಭೇಟಿ ನೀಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net