

ರಮೇಶ ಹಾರ್ಸಿಮನೆ ಸಿದ್ದಾಪುರ
ಅದು ಪ್ರಕೃತಿ ಮಾತೆಯ ಮಡಿಲಲ್ಲಿ ಮೌನವಾಗಿರುವ ಭವ್ಯ ನಿಸರ್ಗ ತಾಣ. ಮನೋಹರ ಕಾನನದ ಮಧ್ಯೆ ಭೋರ್ಗರೆಯುವ ನೇಗಾರ ಜಲಾಪಾತವನ್ನು ನೋಡುವುದೇ ಮನಸಿಗೆ ಮಹದಾನಂದ. ಇಂತಹ ಅದ್ಭುತ ಸಿರಿಯ ಸೊಬಗನ್ನು ಹೊಂದಿರುವ ತಾಣದಕ್ಕೆ ಹೋಗಲು ಸಮರ್ಪಕ ರಸ್ತೆ ಇಲ್ಲ. ಸುರಕ್ಷತೆಯೂ ಇಲ್ಲದಿರುವುದರಿಂದ ಪ್ರವಾಸಿಗರು ಆಗಮಿಸುತ್ತಿಲ್ಲ.
ನೇಗಾರ ಫಾಲ್ಸ್ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೌನವಾಗಿ ತನ್ನ ವೈಭವವನ್ನು ಹರಡಿಕೊಂಡಿದೆ. ದೊಡ್ಮನೆ ಸಮೀಪದ ಬಳೂರಿನಲ್ಲಿ ಹುಟ್ಟಿ ಕಟ್ಟೆಗದ್ದೆ- ನೇಗಾರ ಅರಣ್ಯದ ಕಣಿವೆಯಲ್ಲಿ ಕಲ್ಲುಬಂಡೆಯನ್ನೇರಿಳಿದು ನಂತರ ಅಘನಾಶಿನಿಯಲ್ಲಿ ಲೀನವಾಗುತ್ತದೆ. ಜಲಪಾತವನ್ನು ಎದುರುಗಡೆಯಿಂದ ನೋಡುವುದು ಒಂದು ಅದ್ಭುತ ಅನುಭವ, ಆದರೆ, ಇಲ್ಲಿ ಅದಕ್ಕೆ ಅವಕಾಶವಿಲ್ಲ. ಜಲಪಾತದ ಹಿಂಭಾಗದ ಅರಣ್ಯದ ಕಾಲುದಾರಿಯಲ್ಲಿ ಸಾಗಿ ನೂರಾರು ಅಡಿ ಎತ್ತರದಿಂದ ಬೀಳುವ ನೀರಿನ ಸೊಬಗನ್ನು ಕಣ್ತುಂಬಿಸಿಕೊಳ್ಳಬೇಕಷ್ಟೆ!
ಜಲಪಾತ ನೋಡಿ ಪುನಃ ಬಂದ ದಾರಿಯಲ್ಲಿಯೇ ಮರಳಿ ಬರಬೇಕು. ಬೇರುಗಳನ್ನೆ ಆಸರೆಯನ್ನಾಗಿ ಮಾಡಿಕೊಂಡು ಗುಡ್ಡ ಏರುವಾಗ ಸಾಕಪ್ಪ ನೇಗಾರ ಜೋಗದ ಸಹವಾಸ ಎನ್ನುವಂತಾಗುತ್ತದೆ. ಆದರೂ ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು. ಜಲಪಾತದ ಸವಿಯನ್ನು ಸವಿಯಬೇಕು ಎನ್ನುವ ಹಂಬಲ ಉಂಟಾಗುತ್ತದೆ. ಜಲಪಾತದ ಸಮೀಪ ಯಾವುದೇ ಮನೆಗಳಿಲ್ಲ. ಪ್ರವಾಸಕ್ಕೆ ಬರುವಾಗಲೇ ಅವಶ್ಯವಿರುವ ತಿಂಡಿ ತಿನಿಸುಗಳನ್ನು ತರಬೇಕು. ಹೋಟೆಲ್, ವಸತಿ ಸೌಲಭ್ಯಗಳಿಲ್ಲದಿರುವುದರಿಂದ ಬೆಳಗ್ಗೆಯೇ ಬಂದು ಸಂಜೆಯಾಗುವುದರೊಳಗೆ ವಾಪಸ್ ಹೋಗಬೇಕು. ರಾತ್ರಿಯಾದರೆ ಕಾಡುಪ್ರಾಣಿಗಳ ಅಬ್ಬರ ಭಯವನ್ನುಂಟು ಮಾಡುತ್ತದೆ.
ಬಂದು ಹಿಂದಿರುಗುತ್ತಾರೆ...: ಜಲಪಾತವನ್ನು ವೀಕ್ಷಿಸಲು ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಜಲಪಾತಕ್ಕೆ ತೆರಳಲು ರಸ್ತೆ ಇಲ್ಲ. ಸೂಕ್ತ ಮಾರ್ಗದರ್ಶನ ನೀಡುವವರಿಲ್ಲ. ಹೀಗಾಗಿ ನೇಗಾರ ಊರಿನವರೆಗೆ ಬಂದು ಪಾಪಸಾಗುತ್ತಾರೆ.
ನೇಗಾರನಿಂದ 2.5 ಕಿಮಿ ಕಚ್ಚಾ ರಸ್ತೆ ಇರುವ ಅರಣ್ಯದಲ್ಲಿ ಜಲಪಾತಕ್ಕೆ ಸಾಗಬೇಕು. ಸಿದ್ದಾಪುರ-ಕುಮಟಾ ರಸ್ತೆಯ ಕ್ಯಾದಗಿ-ಇಳಿಮನೆ-ನೇಗಾರ ಮಾರ್ಗವಾಗಿ ಜಲಪಾತಕ್ಕೆ 30 ಕಿ.ಮೀ ಹಾಗೂ ಸಿದ್ದಾಪುರ-ಕುಮಟಾ ರಸ್ತೆಯ ದೊಡ್ಮನೆಯಿಂದ ಜಲಪಾತಕ್ಕೆ 9 ಕಿ.ಮೀ. ಅಂತರವಿದೆ.
ಆಯ ತಪ್ಪಿದರೆ ಆಪತ್ತು..!: ಸುತ್ತಲೂ ಅರಣ್ಯ ಪ್ರದೇಶದಿಂದ ವ್ಯಾಪಿಸಿದ್ದು ಜಲಪಾತದ ಬುಡಕ್ಕೆ ಹೋಗಬೇಕಾದರೆ ಹರಸಾಹಸ ಮಾಡಬೇಕು. ಕಡಿದಾದ ಕಣಿವೆಯಲ್ಲಿ ಸ್ವಲ್ಪ ಎಚ್ಚರ ತಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನೂರಾರು ಅಡಿ ಆಳವಾದ ತಗ್ಗಿಗೆ ಬಿದ್ದರೆ ಮೇಲೆ ಬರುವುದು ಕಷ್ಟಸಾಧ್ಯ. ಹರಸಾಹಸ ಪಟ್ಟು ಜಲಪಾತದ ಸಮೀಪ ಬಂದರಂತೂ ಸ್ವರ್ಗದಲ್ಲಿದ್ದ ಅನುಭವವಾಗುತ್ತದೆ.
ಕಡಿದಾದ ಕಣಿವೆಯಲ್ಲಿ ಸಾಗಿ ನೇಗಾರ ಜಲಪಾತ ನೋಡುವುದು ಕಷ್ಟಸಾಧ್ಯ. ಅರಣ್ಯದಲ್ಲಿ ರಸ್ತೆ, ವ್ಯವಸ್ಥಿತವಾದ ಮೆಟ್ಟಿಲು ಹಾಗೂ ವೀಕ್ಷಣಾ ಗೋಪುರ ನಿರ್ವಿುಸಿದರೆ ಮಾತ್ರ ನಿರಾತಂಕವಾಗಿ ಜಲಪಾತವನ್ನು ಕಣ್ತುಂಬಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಂಬಂಧಪಟ್ಟ ಇಲಾಖೆಯವರು ಈ ಬಗ್ಗೆ ಗಮನ ಹರಿಸಬೇಕು.| ಶಿವಾನಂದ ಹೆಗಡೆ ನೇಗಾರ, ಸ್ಥಳೀಯ ನಿವಾಸಿ
ನೇಗಾರ ಜಲಪಾತಕ್ಕೆ ಸಮರ್ಪಕವಾದ ರಸ್ತೆ ನಿರ್ಮಾಣ ಮಾಡುವುದರ ಬಗ್ಗೆ ಸ್ಥಳೀಯರೊಂದಿಗೆ ಸ್ಥಳ ಪರಿಶೀಲಿಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ.| ಶೇಷಶಯನ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಿದ್ದಾಪುರ