

ಕಾರವಾರ: ಇಯರ್ ಎಂಡ್, ಕ್ರಿಸ್ ಮಸ್ ಎಂದು ಜಿಲ್ಲೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ತಾಣಗಳಲ್ಲಿ ಪ್ರವಾಸಿಗರು ಮೋಜು, ಮಸ್ತಿಯಲ್ಲಿ ತೊಡಗಿದ್ದು, ಅವಘಡಗಳೂ ಹೆಚ್ಚಾಗುತ್ತಿವೆ. ಶನಿವಾರ ಮುರ್ಡೇಶ್ವರದಲ್ಲಿ ಅಪಾಯಕ್ಕೆ ಸಿಲುಕಿದ್ದ ಹಾಸನ ಜಿಲ್ಲೆಯ ಅರಸೀಕೆರೆಯ ಧನಂಜಯ ಎಂಬಾತನನ್ನು ಲೈಫ್‌ಗಾರ್ಡ್‌ಗಳು ರಕ್ಷಿಸಿದ್ದಾರೆ. ಅಂಕೋಲಾ ತಾಲೂಕಿನ ಅಚವೆ ವಿಭೂತಿ ಪಾಲ್ಸ್ಗೆ ವಿಕ್ಷಣೆಗೆ ಬಂದಿದ್ದ ಪ್ರವಾಸಿಗನೊಬ್ಬ ಪಾಲ್ಸ್ನಲ್ಲಿ ಈಜಾಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಆಂದ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಪರ್ವಿನ್ ಮಾರ್ಬಲ್ಸ್ ಶಿರಡಿ ಸಾಯಿ ನಗರದ ನಿವಾಸಿ ಮತ್ತು ಬೆಂಗಳೂರು ವಿಪ್ರೋ ಕಂಪನಿಯಲ್ಲಿ ಸಾಪ್ಟವೇರ್ ಇಂಜಿನಿಯರ್ ಶ್ಯಾಮ ವೀರವೆಂಕಟ ದುರ್ಗಾ (21) ಸಾವನ್ನಪ್ಪಿದವರು. ತನ್ನ 10 ಮಂದಿ ಗೆಳೆಯ ರೊಂದಿಗೆ ಬೆಂಗಳೂರು ನಿಂದ ರೈಲಿನಲ್ಲಿ ಬಂದು ಅಲ್ಲಿಂದ ಖಾಸಗಿ ವಾಹನ ಮೂಲಕ ವಿಭೂತಿ ಪಾಲ್ಸ್ಗೆ ಬಂದಿದ್ದ ಎನ್ನಲಾಗಿದೆ.
ಅತಿರೇಕ:
ಜಿಲ್ಲೆಯ ಕಡಲ ತೀರ ಫಾಲ್ಸ್‌ಗಳಿಗೆ ಬರುತ್ತಿರುವ ಪ್ರವಾಸಿಗರು ಅತಿರೇಕವಾಗಿ ವರ್ತಿಸುತ್ತಿದ್ದಾರೆ. ಮುರ್ಡೇಶ್ವರದಲ್ಲಿ ಲೈಫ್ ಗಾರ್ಡ್‌ಗಳ ಸೂಚನೆಯನ್ನೂ ಮೀರಿ ಸಮುದ್ರಕ್ಕಿಳಿಯುತ್ತಿದ್ದಾರೆ. ಲೈಫ್‌ಗಾರ್ಡ್‌ಗಳು ಸೂಚನೆ ಕೊಟ್ಟಲ್ಲಿ ಅವರ ಜಗೆ ವಾಗ್ವಾದಕ್ಕಿಳಿಯುತ್ತಿದ್ದಾರೆ. ಪ್ರವಾಸಿಗರು ಲೈಫ್‌ಗಾರ್ಡ್‌ಗಳ ಜತೆ ಅನುಚಿತವಾಗಿ ವರ್ತಿಸಿದ ವಿಡಿಯೋಗಳು ವೈರಲ್ ಆಗಿವೆ. ಅಷ್ಟೇ ಅಲ್ಲ ಲೈಫ್‌ಗಾರ್ಡ್‌ಗಳ ಮೇಲೆಯೇ ಹಲ್ಲೆ ನಡೆಸಿದ ಉದಾಹರಣೆಗಳೂ ಇವೆ. ಇನ್ನೂ ಸೂಚನೆ ನೀಡಿದರೆ, ನಾವು ಅವರ ಕಡೆಯವರು, ಇವರ ಕಡೆಯವರು ಎಂದು ಇನ್ ಫ್ಲುಯೆನ್ಸ್, ರುಬಾರು ತೋರಿಸುತ್ತಾರೆ ಎಂಬುದು ಲೈಫ್ ಗಾರ್ಡ್‌ಗಳ ಗೋಳು. ಎಲ್ಲೆಡೆ ಬೋರ್ಡ್ ಅಳವಡಿಸಿದ್ದರೂ ಅಪಾಯ ಲೆಕ್ಕಿಸದೇ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಜೀವ ಕಳೆದುಕೊಳ್ಳುತ್ತಿದ್ದಾರೆ. ಇದೇ ವಾರ 10 ಕ್ಕೂ ಹೆಚ್ಚು ಪ್ರವಾಸಿಗರನ್ನು ಮುರ್ಡೇಶ್ವರದಲ್ಲಿ ರಕ್ಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಐದಕ್ಕೂ ಹೆಚ್ಚು ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ.