

ಜೊಯಿಡಾ: ಅರಣ್ಯದಲ್ಲಿ ಪ್ರವಾಸ ಮಾಡುವವರು ಖಗ, ಮೃಗ ಸಂಕುಲಗಳಿಗೆ ಹಾನಿಯಾಗದಂತೆ ಶಿಸ್ತು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಕಿವಿಮಾತು ಹೇಳಿದರು.
ಪ್ರವಾಸದ್ಯಮ ಇಲಾಖೆಯಿಂದ, ಸೂಪಾ ವಾಟರ್ ಸ್ಪೋಟ್ಸ್ ರ್ ಅಸೋಸಿಯೇಶನ್ ಸಹಯೋಗದಲ್ಲಿ ಗಣೇಶಗುಡಿ ಸಮೀಪ ಕಾಳಿ ನದಿಯಲ್ಲಿ ಭಾನುವಾರ ಆಯೋಜಿಸಿದ್ದ ಕಯಾಕ್ ಫೆಸ್ಟಿವಲ್ನಲ್ಲಿ ಅವರು ಮಾತನಾಡಿದರು.
ಅರಣ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಕಾಡಿನ ನಡುವೆ ಚಾರಣದ ವಿಚಾರ ಇನ್ನೂ ಚರ್ಚೆಯಲ್ಲಿದೆ ಎಂದರು.
ಸರ್ಕಾರ ಪ್ರವಾಸೋದ್ಯಮ ಅಭಿವೃದ್ಧಿಗೆ ವೇದಿಕೆ ಸಿದ್ಧಪಡಿಸಿಕೊಡಲು ಮಾತ್ರ ಸಾಧ್ಯ. ಅದಕ್ಕೆ ಪೂರಕವಾಗಿ ನಾವು, ಗಾಳಿಪಟ ಉತ್ಸವ, ಸ್ಕೂಬಾ ಉತ್ಸವ ನಡೆಸಿದ್ದು, ಮುಂದಿನ ದಿನದಲ್ಲಿ ಹಾರ್ನ್ಬಿಲ್ ಉತ್ಸವ ನಡೆಸಲಾಗುವುದು ಎಂದರು. ಸ್ಥಳೀಯರು ಅದನ್ನು ಬೆಳೆಸಿಕೊಂಡು ಉದ್ಯಮ ಬೆಳೆಸಬೇಕು. ಪ್ರವಾಸಿಗರನ್ನು ದೇವರಂತೆ ಕಂಡಾಗ ಉದ್ಯಮ ಬೆಳೆಯಲು ಸಾಧ್ಯ ಎಂದು ಸಲಹೆ ನೀಡಿದರು.
ಜಿಪಂ ಸದಸ್ಯ ರಮೇಶ ಜುಂಜು ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಅವೇಡಾ ಗ್ರಾಪಂ ಅಧ್ಯಕ್ಷೆ ಕಸ್ತೂರಬಾ ಗುಡಿ, ಜೊಯಿಡಾದಲ್ಲಿ ನಾಗರಿಕ ಸೌಲಭ್ಯ ಅಭಿವೃದ್ಧಿಗೆ ಕ್ರಮ ವಹಿಸುವಂತೆ ಮನವಿ ಮಾಡಿದರು.
ಎಡಿಸಿ ನಾಗರಾಜ ಸಿಂಗ್ರೇರ್, ಉಪವಿಭಾಗಾಧಿಕಾರಿಗಳಾದ ಪ್ರಿಯಾಂಗಾ ಎಂ. ಭರತ್, ಕಾಳಿ ಹುಲಿ ಸಂರಕ್ಷಿತ ಅಭಯಾರಣ್ಯ ದ ಸಿಸಿಎಫ್ ಮಾರಿಯಾ ಕ್ರಿಸ್ಟೋಫರ್, ಹಳಿಯಾಳ ಡಿಎಫ್ ಒ ಅಜ್ಜಯ್ಯ, ಇದ್ದರು. ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಪುರುಷೋತ್ತಮ ಸ್ವಾಗತಿಸಿದರು.
ಹಾರ್ನ್ಬಿಲ್ ರಿವರ್ ರೆಸಾರ್ಟ್, ಹಾರ್ನ್ಬಿಲ್ ಅಡ್ವೆಂಚರ್ ಜೋನ್, ಫ್ಲೈಕೇಚರ್ ಎಂಡ್ವೆಂಚರ್ಸ್, ಲಗುನಾ ವಾಟರ್ ಸ್ಪೋಟ್ಸ್, ಬಿಸೊನ್ ರಿವರ್ ರೆಸಾರ್ಟ್, ವಿಸ್ಲಿಂಗ್ವುಡ್ಸ್, ಅಕ್ವಾ ವುಡ್ಸ್, ಮಹಾನ್ ಅಡ್ವೆಂಚರ್ಸ್, ಕಾಳಿ ಅಡ್ವೆಂಚರ್ಸ್ ಸೇರಿ 9 ಪ್ರವಾಸೋದ್ಯಮ ಸಂಸ್ಥೆಗಳಿಂದ ನೂರಾರು ಪ್ರವಾಸಿಗರು ತಣ್ಣನೆಯ ಕಪ್ಪು ಕಾಳಿ ನೀರಲ್ಲಿ ರ್ಯಾಫ್ಟಿಂಗ್ ನಡೆಸಿದರು.
ಈ ಬಾರಿ ಜಿಲ್ಲಾಡಳಿತದ ಸೂಚನೆ ಸಹಕಾರದಂತೆ ಸೀಮಿತ ಪ್ರದೇಶದಲ್ಲಿ ಕಯಾಕಿಂಗ್ ಫೆಸ್ಟಿವಲ್ ನಡೆಸಿದ್ದೇವೆ. ಮುಂದಿನ ಬಾರಿ ರ್ಯಾಫ್ಟಿಂಗ್ ಉತ್ಸವ, ಸ್ಪರ್ಧೆಗಳನ್ನು ನಡೆಸುವ ಯೋಜನೆ ಹೊಂದಿದ್ದೇವೆ. ಸೋಮಶೇಖರ್(ಬಾಬು) ಸೂಪಾ ವಾಟರ್ ಸ್ಪೋಟ್ಸ್ ರ್ ಅಸೋಸಿಯೇಶನ್ ಅಧ್ಯಕ್ಷ