ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಆದ್ಯತೆ ಇರಲಿ

18 CRP-1A,
Published on

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-75ರ ಕಿರಿಸಾವೆ ಗಡಿಯಿಂದ ಬರಗೂರು ಹ್ಯಾಂಡ್‌ಪೋಸ್ಟ್‌ವರೆಗೆ ರಸ್ತೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರಸ್ತೆ ಬದಿ ಬೀದಿ ದೀಪಗಳನ್ನು ಅಳವಡಿಸುವುದು ಮತ್ತು ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾಮಗಾರಿ ಕೆಲವೆಡೆ ಬಾಕಿ ಉಳಿದಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕೈಗೊಂಡಿರುವ ಎಸ್‌ಆರ್‌ಸಿ ಕನ್‌ಸ್ಟ್ರಕ್ಷನ್ ಹಾಗೂ ಸೆಸ್ಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿದರು. ಹಿರೀಸಾವೆ ಬಳಿ ಯುಜಿ ಕೇಬಲ್ ಅಳವಡಿಸಿ ಅಗತ್ಯ ಕ್ರಮ ವಹಿಸಬೇಕಿದೆ. ದಿಡಗ ವೃತ್ತದಲ್ಲಿ ಟಿಸಿ ಅಳವಡಿಸಬೇಕು. ಸೆಸ್ಕ್ ಹಾಗೂ ಗುತ್ತಿಗೆದಾರರ ನಡುವಿನ ಹೊಂದಾಣಿಕೆ ಕೊರತೆಯಿಂದ ವಿಳಂಬವಾಗಿದ್ದು ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು.

ಹೆದ್ದಾರಿಯ ಎರಡು ಬದಿಯಲ್ಲಿ ಸರ್ವಿಸ್ ರಸ್ತೆಯಲ್ಲಿರುವ ಕಿರೀಸಾವೆ ಸಹಿತ ಹಿರೀಸಾವೆ, ಎಚ್. ಹೊನ್ನೇನಹಳ್ಳಿ, ಹೆಗ್ಗಡಿಹಳ್ಳಿ, ಮಾದಿಹಳ್ಳಿ, ಮಟ್ಟನವಿಲೆ, ಗೌಡಗೆರೆ, ಮಲವನಘಟ್ಟ ಜೋಗಿಪುರ, ಶೆಟ್ಟಿಹಳ್ಳಿ, ನುಗ್ಗೇಹಳ್ಳಿ ಜಂಕ್ಷನ್, ಕಲಸಿಂದ ಹಾಗೂ ಬರಗೂರು ಹ್ಯಾಂಡ್‌ಪೋಸ್ಟ್ ಮತ್ತು ಗುಲಸಿಂದದಲ್ಲಿ ರಸ್ತೆಬದಿ ದೀಪಗಳು ಇನ್ನೂ ಉರಿಯುತ್ತಿಲ್ಲ. ಗುಲಸಿಂದ ಹೊರತುಪಡಿಸಿ ಉಳಿದ ಕಡೆ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಭಾಗದಲ್ಲಿ 20 ದಿನಗಳಲ್ಲಿ ಎಲ್ಲ ಕಡೆ ಬೀದಿ ದೀಪಗಳನ್ನು ದುರಸ್ತಿ ಮಾಡಲಾಗುವುದು ಎಂದರು.

ಹಿರೀಸಾವೆಯಲ್ಲಿ ವಿದ್ಯುತ್ ವಿತರಣಾ ಕೇಂದ್ರದ ಬಳಿ ಮೇಲ್ಭಾಗದಲ್ಲಿ ಕೇಬಲ್ ಅಳವಡಿಸಲಾಗಿತ್ತು. ಅದನ್ನು ಈಗ ಅಂಡರ್‌ಪಾಸ್‌ನಲ್ಲಿ ಅಳವಡಿಸಲಾಗುವುದು. ಅದೇ ರೀತಿ ದಿಡಗ ರಸ್ತೆಯ ವೃತ್ತದಲ್ಲಿ ವಿದ್ಯುತ್ ಪರಿವರ್ತಕ ಅಳವಡಿಸಬೇಕಿದೆ. ಹಿರೀಸಾವೆ, ಶ್ರವಣಬೆಳಗೊಳ ರಸ್ತೆಭಾಗ, ರಾಜಾಪುರ ಗೇಟ್, ಬ್ಯಾಡರಹಳ್ಳಿ, ಯಾಳನಹಳ್ಳಿ ಗೇಟ್, ದೊಡ್ಡರಿಕಾವಲು ಬಳಿ ಪ್ರಯಾಣಿಕರ ತಂಗುದಾಣಗಳನ್ನು ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಈ ಸಂಬಂಧ ಪತ್ರ ವ್ಯವಹಾರ ಮಾಡಿ ಶೀಘ್ರ ಕಾಮಗಾರಿ ಆರಂಭಿಸಲು ಕ್ರಮವಹಿಸಬೇಕು ಎಂದು ಹೇಳಿದರು.

ಗುಲಸಿಂದ ಬಳಿ ಬೆಂಗಳೂರು ಮಾರ್ಗದಿಂದ ಬಾಗೂರು ರಸ್ತೆಗೆ ಸಂಪರ್ಕ ಕಲ್ಪಿಸುವ 400 ಮೀಟರ್ ರಸ್ತೆ ನಿರ್ಮಿಸಬೇಕಿದೆ. ಅದೇ ರೀತಿ ಬಾಗೂರು ರಸ್ತೆಯಿಂದ ಹಾಸನದ ಕಡೆಗೆ ಸಂಪರ್ಕ ಕಲ್ಪಿಸುವ 500 ಮೀಟರ್ ರಸ್ತೆ ನಿರ್ಮಿಸಲಾಗುವುದು. ಸಾರ್ವಜನಿಕರಿಗೆ ಅನುಕೂಲ ಒದಗಿಸುವ ದೃಷ್ಟಿಯಿಂದ 3 ಕಡೆ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಬೇಕು ಎಂದು ಗುತ್ತಿಗೆದಾರರ ಗಮನಕ್ಕೆ ತಂದರು. ಗ್ರಾಮೀಣ ರಸ್ತೆಗಳು ಹಾಳಾಗಿದ್ದು ಬೇರೆ ಮೂಲಗಳಿಂದ ಆ ರಸ್ತೆಗಳನ್ನು ಸರಿಪಡಿಸಲಾಗುವುದು. ಸೆಸ್ಕ್ ಮತ್ತು ಹೆದ್ದಾರಿ ಇಲಾಖೆ ಸಮನ್ವಯದಿಂದ ಕೆಲಸ ಮಾಡುವಂತೆ ತಿಳಿಸಲಾಗಿದೆ. ಇನ್ನು 20 ದಿನದ ಬಳಿಕ ಅಧಿಕಾರಿಗಳ ಸಭೆ ಕರೆದು ಚರ್ಚಿಸಲಾಗುವುದು ಎಂದರು.

ಸೆಸ್ಕ್ ಕಾರ್ಯಪಾಲಕ ಇಂಜಿನಿಯರ್ ಆರ್.ರತ್ನಾ, ಸಹಾಯಕ ತಾಂತ್ರಿಕ ಇಂಜಿನಿಯರ್ ಎನ್.ಆರ್.ಹರೀಶ್, ವಜ್ರ ಕುಮಾರ್, ಕಿರಿಯ ಇಂಜಿನಿಯರ್ ವೆಂಕಟೇಶ್, ಗುತ್ತಿಗೆದಾರರಾದ ಸೋಮಶೇಖರ್, ಸಚಿನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net