ಪ್ರಯಾಣಿಕರ ಎದುರೇ ಹೊಡೆದಾಡಿಕೊಂಡ ಚಾಲಕ, ನಿರ್ವಾಹಕ

8bkl1 (3) (1)
Published on

ವಿಜಯವಾಣಿ ಸುದ್ದಿಜಾಲ ಭಟ್ಕಳ
ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕ ಕರ್ತವ್ಯದಲ್ಲಿರಬೇಕಾದರೆ ರಸ್ತೆಯ ಮೇಲೆ ಹೊಡೆದಾಡಿಕೊಂಡು ಪ್ರಯಾಣಿಕರಿಗೆ ಹಿಂಸೆ ನೀಡಿದ ಘಟನೆ ತಾಲೂಕಿನ ಸರ್ಪನಕಟ್ಟೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಮಂಗಳೂರು ಡೀಪೋಗೆ ಸೇರಿದ ಮಂಗಳೂರಿನಿಂದ ಗದಗ, ಗಜೇಂದ್ರಗಡ ದೋಟಿಹಾಳ ಹೋಗುವ ಬಸ್ಸಿನಲ್ಲಿ ಬುಧವಾರ ರಾತ್ರಿ ಬಸ್ ಚಾಲಕ ಮತ್ತು ನಿರ್ವಾಹಕರ ನಡುವೆ ಹೆದ್ದಾರಿ ಮದ್ಯದಲ್ಲೆ ಹೊಡೆದಾಟ ನಡೆದಿದೆ.. ಸುರಕ್ಷಿತವಾಗಿ ಪ್ರಯಾಣಿಕರನ್ನು ಗುರಿ ತಲುಪಿಸಬೇಕಾದ ಬಸ್ಸಿನಲ್ಲಿ ಪ್ರಯಾಣಿಕರಿಗೆ ಸುರಕ್ಷತೆ ಇಲ್ಲದಂತಾಗಿದೆ. ಮಂಗಳೂರು ಕಡೆಯಿಂದ ದೋಟಿಹಾಳ ತೆರಳುವ ಬಸ್ಸಿನಲ್ಲಿ ಬುಧವಾರ ರಾತ್ರಿ ಪ್ರಯಾಣಿಕರು ಕಿಕ್ಕಿರುದ್ದು ತುಂಬಿದ್ದರು. ಭಟ್ಕಳದ ಹಿಂದೆ ಕುಂದಾಪುರದ ಫ್ಲೈ ಓವರ್‌ನ ಬಳಿಯಲ್ಲ್ಲೂ ಚಾಲಕನ ಮೀತಿ ಮೀರಿದ ವೇಗದಿಂದ ಬೈಕ್ ಸವಾರಿನಿಗೆ ಡಿಕ್ಕಿ ಹೊಡೆಯಲು ಹೋಗಿದ್ದು ಕ್ಷಣಾರ್ಧದಲ್ಲಿ ಬೈಕ್‌ ಸವಾರ ಅಪಾಯದಿಂದ ಪಾರಾಗಿದ್ದಾನೆ. ನಂತರ ಬಸ್ ಅಡ್ಡಗಟ್ಟಿ ಚಾಲಕನಿಗೆ ಹಿಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿತ್ತು. ಬಳಿಕ ಭಟ್ಕಳಕ್ಕೆ ಬರುತ್ತಿರುವಾಗಲೂ ಚಾಲಕ ಅದೇ ವೇಗ ಮತ್ತು ನಿರ್ಲಕ್ಷ್ಯದಿಂದ ಬಸ್ ಚಲಾಯಿಸುತ್ತಿದ್ದ. ಇದರಿಂದ ಪ್ರಯಾಣಿಕರು ಗಾಬರಿಯಾಗಿದ್ದರು. ನಿರ್ವಾಹಕನಿಗೆ ಈ ಕುರಿತು ಹೇಳಿದಾಗ, ಬಸ್ ಸ್ವಲ್ಪ ನಿಧಾನ ಚಲಿಸುವಂತೆ ಚಾಲಕನಿಗೆ ನಿರ್ವಾಹಕರು ಹೇಳಿದ್ದಾರೆ. ನಿರ್ವಾಹಕ ಮಾತು ಕೇಳಿ ಸಿಟ್ಟಾದ ಚಾಲಕ ಬಸ್ಸನ್ನು ಸ್ಥಳದಲ್ಲೆ ನಿಲ್ಲಿಸಿ, ನಿರ್ವಾಹಕರ ಮೇಲೆರಗಿದ್ದಾನೆ. ಪ್ರಯಾಣಿಕರು ಎಷ್ಟೇ ಹೇಳಿದರು ಕೇಳದೆ ನಿರ್ವಾಹಕನ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಬೇಸರಗೊಂಡ ನಿರ್ವಾಹಕ ತಾನು ಬಸ್ ಇಳಿದು ಹೋಗುತ್ತೇನೆ. ನನಗೆ ನೌಕರಿಯೆ ಬೇಡ ಎಂದು ಬಸ್ಸಿನಿಂದ ಇಳಿದಿದ್ದಾನೆ. ಬಳಿಕ ಪ್ರಯಾಣಿಕರು ಮನವೋಲಿಸಿ ಬಸ್‌ ಹತ್ತಿಸಿದ್ದಾರೆ. ಇಷ್ಟಕ್ಕೂ ಚಾಲಕ ಸುಮ್ಮನಾಗದೆ ಮತ್ತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಸ್ಸಿನಲ್ಲಿದ್ದ ಪ್ರಯಾಣಿಕರು ತಾನು ನಿಮ್ಮ ಜಗಳವನ್ನು ವಿಡಿಯೋ ಮಾಡಿ ಬಸ್ ಡೀಪೋ ಗೆ ಕಳುಹಿಸುತ್ತೇನೆ. ನಮಗೆ ಬೇರೆ ಬಸ್‌ ಹತ್ತಿಸಿ ಎಂದು ಪಟ್ಟು ಹಿಡಿದಿದ್ದಾರೆ. ನಂತರ ಸುಮ್ಮನಾದ ಚಾಲಕ ಬಸ್ಸನ್ನು ಮುಂದಿನ ಸ್ಥಳಕ್ಕೆ ಕೊಂಡೊಯ್ದಿದ್ದಾನೆ. ಚಾಲಕ ಮತ್ತು ನಿರ್ವಾಹಕರ ಹೊಡೆದಾಟ ಪ್ರಯಾಣಿಕರಿಗೆ ಹಿಂಸೆ ನೀಡಿದ್ದು ಮಾತ್ರವಲ್ಲದೆ ಮುಂದಿನ ಪಯಣವನ್ನು ಜೀವ ಕೈಯಲ್ಲಿ ಹಿಡಿದು ತೆರಳುವಂತಾಯಿತು. ಇಂತಹ ನಿರ್ಲಕ್ಷ್ಯದ ಸಿಬ್ಬಂದಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net