ಪ್ರಯಾಣ ಅವಧಿ ಹೆಚ್ಚಳಕ್ಕೆ ವಿರೋಧ

4KWR3
Published on

ಕಾರವಾರ: ಬೆಂಗಳೂರು- ಕಾರವಾರ ರೈಲಿನ ಪ್ರಯಾಣ ಸಮಯ ಹೆಚ್ಚಳ ಪ್ರಕ್ರಿಯೆ ನಡೆದಿದೆ ಎಂಬ ಮಾಹಿತಿ ಇದೆ. ಅದನ್ನು ಖಂಡಿಸಿ ಕರವೇ ನಾರಾಯಣ ಗೌಡ ಬಣದ ಪದಾಧಿಕಾರಿಗಳು ಇಲ್ಲಿನ ಶಿರವಾಡ ಕೊಂಕಣ ರೈಲ್ವೆ ನಿಲ್ದಾಣದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. ಕೊಂಕಣ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ನಿಗಮದ ವಿರುದ್ಧ ಘೊಷಣೆ ಕೂಗಿದರು.

ಪಶ್ಚಿಮ ಕರಾವಳಿ ರೈಲ್ವೆ ಅಭಿವೃದ್ಧಿ ಸಮಿತಿಯ ರಾಜೀವ ಗಾಂವಕರ್ ಮಾತನಾಡಿ, ಕೊಂಕಣ ರೈಲ್ವೆ ಹಳಿ ನಿರ್ವಣವಾಗಿ 30 ವರ್ಷವಾಗುತ್ತಿದೆ. ಆದರೆ, ಇದುವರೆಗೂ ಕಾರವಾರದಲ್ಲಿ ಟರ್ವಿುನಲ್ ನಿರ್ವಣವಾಗಿಲ್ಲ. ಕಾರವಾರದಿಂದ ಹೊಸ ರೈಲುಗಳನ್ನು ಪ್ರಾರಂಭಿಸಲು ಇದೇ ದೊಡ್ಡ ಹಿನ್ನಡೆಯಾಗಿದೆ.

ರೈಲುಗಳು ಇಂಧನ ತುಂಬಲು ಹಾಗೂ ಸ್ವಚ್ಛತೆ, ಇತರ ನಿರ್ವಹಣೆ ಕೆಲಸಕ್ಕಾಗಿ ಇಲ್ಲಿಂದ ಗೋವಾದ ಮಡಗಾಂವ್​ಗೆ ತೆರಳಬೇಕಿದೆ. ಈ ಹಿಂದೆ ಬೆಂಗಳೂರು ಬಿಟ್ಟ ರೈಲು ಕಾರವಾರ ತಲುಪಲು 18 ತಾಸು ಬೇಕಿತ್ತು. ಸಾಕಷ್ಟು ಹೋರಾಟ ಮಾಡಿದ ನಂತರ ಬೆಂಗಳೂರು- ಕಾರವಾರ ರೈಲಿನ ಪ್ರಯಾಣದ ಅವಧಿಯನ್ನು 12 ತಾಸಿಗೆ ಕಡಿಮೆ ಮಾಡಲಾಗಿದೆ. ಇದರಿಂದ ಜಿಲ್ಲೆಯ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಆದರೆ, ಕೊಂಕಣ ರೈಲ್ವೆ ಮತ್ತೆ ರೈಲಿನ ಪ್ರಯಾಣದ ಅವಧಿಯನ್ನು ವಿಳಂಬ ಮಾಡಲು ಹೊರಟಿದೆ.

ಕೊಂಕಣ ರೈಲು ಹಳಿ, ನಿಲ್ದಾಣಗಳ ನಿರ್ವಣಕ್ಕಾಗಿ ಕರ್ನಾಟಕದಲ್ಲಿ 270 ಕಿ.ಮೀ. ಜಾಗವನ್ನು ಇಲ್ಲಿನ ಜನ ಬಿಟ್ಟುಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರ ಕೊಂಕಣ ರೈಲ್ವೆ ನಿಗಮದ ಎರಡನೇ ಅತಿ ದೊಡ್ಡ ಹೂಡಿಕೆದಾರ. ಆದರೆ, ಉದ್ಯೋಗ ನೀಡುವಲ್ಲಿ ಕರ್ನಾಟಕ್ಕೆ ಭಾರಿ ಅನ್ಯಾಯವಾಗಿದೆ. ಮಹಾರಾಷ್ಟ್ರದ ಜನರಿಗೆ ನೀಡಿದ ಶೇ. ಅರ್ಧದಷ್ಟು ಉದ್ಯೋಗವನ್ನು ಕರ್ನಾಟಕದ ಜನರಿಗೆ ನೀಡಿಲ್ಲ. ಈ ಎಲ್ಲದರ ಬಗ್ಗೆ ಎಷ್ಟೇ ಬಾರಿ ಮನವಿ ಮಾಡಿದರೂ ನಿಗಮ ಸ್ಪಂದಿಸುತ್ತಿಲ್ಲ ಎಂದರು.

ಆರ್​ಆರ್​ಎಂ ಬಾಳಾ ಸಾಹೇಬ್ ನಿಕ್ಕಂ ಮನವಿ ಸ್ವೀಕರಿಸಿದರು. ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ, ಅರುಣ ಹರ್ಕಡೆ, ನರೇಂದ್ರ ತಳೇಕರ್, ಪೂರ್ಣಿಮಾ ಮಾಹೇಕರ್, ಅಶೋಕ ಗೌಡ, ಮೋಹನದಾಸ ಗೌಡ, ಹರೀಶ ಗೌಡ, ವಿನಾಯಕ ನಾಯ್ಕ, ತಿಮ್ಮಪ್ಪ ನಾಯ್ಕ, ಮಹೇಂದ್ರ ನಾಯ್ಕ, ನಾಗು ಹಳ್ಳೇರ, ಗೋವರ್ಧನ ಗೌಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net