

ಬಾಗಲಕೋಟೆ: ದಕ್ಷಿಣ ಕರ್ನಾಟಕ ಭಾಗಕ್ಕೆ ಹೋಲಿಕೆ ಮಾಡಿದರೇ ಉತ್ತರ ಕರ್ನಾಟಕ ಹಿಂದುಳಿದೆ. ಆಳ್ವೆ ನಡೆಸಿದ ಎಲ್ಲ ಸರ್ಕಾರಗಳು ಅಭಿವೃದ್ಧಿಗೆ ಮುಂದಾಗಿಲ್ಲ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಉ-ಕ ಸಮಗ್ರ ಅಭಿವೃದ್ಧಿಗೆ ಅನುದಾನ ಮೀಸಲಿಟ್ಟು ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಪ್ರತ್ಯೇಕ ರಾಜ್ಯಕ್ಕೆ ಹೋರಾಟ ಅನಿವಾರ್ಯವಾಗಲಿದೆ ಎಂದು ಹಿರಿಯ ನ್ಯಾಯವಾದಿ, ಹೋರಾಟಗಾರ ಬಿ.ಡಿ.ಹಿರೇಮಠ ಎಚ್ಚರಿಕೆ ನೀಡಿದರು.
ನಗರದ ಡಿಸಿ ಕಚೇರಿ ಎದುರು ನಡೆಯುತ್ತಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಬಾಧಿತ ಸಂತ್ರಸ್ತರ ಹೋರಾಟಕ್ಕೆ ಶುಕ್ರವಾರ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ನಮ್ಮ ಭಾಗದ ಜನ ಪ್ರತಿನಿಧಿಗಳು ನಿಯತ್ತು, ನ್ಯಾಯಯುತವಾಗಿ ಸರ್ಕಾರವನ್ನು ಪ್ರಶ್ನಿಸುವಲ್ಲಿ ವಿಫಲರಾಗಿದ್ದಾರೆ. ಒಂದು ಹನಿ ನೀರಿಗಾಗಿ ಮಂಡ್ಯ, ಮೈಸೂರು ಭಾಗದಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ. ಹೋರಾಟ ಬಂದರೇ ಸಾಕು ನಮ್ಮಲ್ಲಿ ರಾಜಕೀಯ ಬೆರೆಯುತ್ತೆ. ಇದು ಆಗಬಾರದು. ಇದು ಕೊನೆ ಹೋರಾಟ ಆಗಬೇಕು. ನ್ಯಾಯ ಸಮ್ಮತ ಬೇಡಿಕೆ ಈಡೇರದಿದ್ದರೇ ಪ್ರತ್ಯೇಕ ರಾಜ್ಯದ ಕೂಗು ಬಲಗೊಳ್ಳಲಿದೆ ಎಂದು ತಿಳಿಸಿದರು.
ನಮ್ಮ ಜನಪ್ರತಿನಿಧಿಗಳಿಗೆ ನಿಯತ್ತಿದ್ದರೇ ಅವರು ಪಕ್ಷಾತೀತವಾಗಿ ಹೋರಾಟ ಮಾಡಬೇಕು. ಇಲ್ಲದಿದ್ದರೆ ಅವರು ಜನದ್ರೋಹಿಗಳು. ಹೋರಾಟದಿಂದ ಪರಿಹಾರ ಪಡೆಯುವ ಹಕ್ಕು ನಮಗಿದೆ. ಆದರೆ, ಇಲ್ಲಿ ಬರುವ ರಾಜಕಾರಣಿಗಳಿಗಿಲ್ಲ. ಯುಕೆಪಿ ಸೇರಿದಂತೆ ಉತ್ತರ ಕರ್ನಾಟಕದ ಸಮಸ್ಯೆಗೆ ಪರಿಹಾರ ದೊರಕದಿದ್ದಲ್ಲಿ ಪ್ರತ್ಯೇಕ ರಾಜ್ಯದ ಬೇಡಿಕೆ ಅನಿವಾರ್ಯ ಎಂದರು.
ಕೇವಲ ರೈತರಷ್ಟೇ ಸೇರಿ ಹೋರಾಟ ಮಾಡುವುದಕ್ಕಿಂತ ಮುಂದಿನ ವಾರದಲ್ಲಿ ಒಂದು ದಿನ ನಮ್ಮ ಭಾಗದ ಎಲ್ಲ ಕೋರ್ಟ್ ಕಲಾಪಗಳನ್ನು ಬಂದ್ ಮಾಡಿ, ಪಟ್ಟಣ ಪಂಚಾಯ್ತಿ, ನಗರಸಭೆ ಸೇರಿ ಎಲ್ಲ ಸೌಹಾರ್ದ ಸಂಘಗಳಿಂದಲೂ ಹೋರಾಟಕ್ಕೆ ಬೆಂಬಲ ಸಿಗಬೇಕು. ಜೀವವನ್ನು ಲೆಕ್ಕಿಸದೇ ಹೋರಾಟದಲ್ಲಿ ಭಾಗಿಯಾದಾಗ ಮಾತ್ರ ಹೋರಾಟಕ್ಕೆ ತಾರ್ಕಿಕ ಅಂತ್ಯ ಕಾಣಲು ಸಾಧ್ಯ ಎಂದು ಹೇಳಿದರು.
ವಿಪ ಸದಸ್ಯ ಹನುಮಂತ ನಿರಾಣಿ ಮಾತನಾಡಿ, ಯುಕೆಪಿ ವಿಷಯದಲ್ಲಿ ಎಲ್ಲ ಸರ್ಕಾರಗಳು ಕಾಲಹರಣ ಮಾಡಿವೆ. ನಾವು ಗಟ್ಟಿಯಾಗಿ ನಿಂತು ಬೇಡಿಕೆ ಈಡೇರಿಕೆಗೆ ಒತ್ತಾಯಿಸಬೇಕಿದೆ. ಚಳಿಗಾಲ ಅಧಿವೇಶನದಲ್ಲಿ ನಾವು ಸಹಿತ ಈ ಬಗ್ಗೆ ಮಾತನಾಡುವ ಜತೆಗೆ ಯುಕೆಪಿಗೆ ಪ್ರತ್ಯೇಕ ಬಜೆಟ್‌ಗೆ ಆಗ್ರಹಿಸುತ್ತೇವೆ ಎಂದು ತಿಳಿಸಿದರು.