ಪ್ರತಿಭೆ ಅನಾವರಣಕ್ಕೆ ಯುವಜನೋತ್ಸವ ಸಹಕಾರಿ

bkt-18-2
Published on

ಬಾಗಲಕೋಟೆ: ಜಿಲ್ಲೆಯಲ್ಲಿ ಸಾಕಷ್ಟು ವಿಶಿಷ್ಟ ಪ್ರತಿಭೆಗಳಿದ್ದು, ಆ ಪ್ರತಿಭೆಗಳನ್ನು ಅನಾವರಣಗೊಳಿಸಲು ಯುವಜನೋತ್ಸವದಂತ ಕಾರ್ಯಕ್ರಮಗಳು ಸಹಾರಿಯಾಗಿವೆ ಎಂದು ಶಾಸಕ ಎಚ್.ವಾಯ್.ಮೇಟಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಯುವಜನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷಿಯ ನುಡಿಗಳನ್ನು ಆಡಿದ ಅವರು ಪ್ರತಿಯೊಬ್ಬರಲ್ಲಿ ಒಂದೊಂದು ಪ್ರತಿಭೆಗಳಿದ್ದು, ಅವುಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತರಾಗಿರದೇ ಕ್ರೀಡೆ, ಸಂಗೀತ, ನೃತ್ಯ, ಜಾನಪದಂತಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.

ಇಲಾಖೆಯವರು ಇಂತಹ ಕಾರ್ಯಕ್ರಮಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿ, ಜಿಲ್ಲೆಯ ಎಲ್ಲ ಯುವ ಸಮೂಹ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಅಂದಾಗ ಮಾತ್ರ ಕಾರ್ಯಕ್ರಮಕ್ಕೆ ಮಾಡಿದಕ್ಕೆ ಅರ್ಥ ಬರುತ್ತದೆ. ಜಿಲ್ಲಾ ಮಟ್ಟದಲ್ಲಿ ಅಯ್ಕೆಯಾಗಿ ಮುಂದೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ತಮ್ಮ ಛಾಪನ್ನು ಮೂಡಿಸುವಂತಾಗಬೇಕು ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಮಾತನಾಡಿ ಯುವ ಉತ್ಸವ ಎಂಬುದು ಯುವಕರು ಹುರುಪು ಹುಮ್ಮಸ್ಸಿನಿಂದ ಕುಣಿದು ಕುಪ್ಪಳಿಸುವ ಕಾರ್ಯಕ್ರಮವಾಗಿದ್ದು, ಈ ವೇದಿಕೆಯಲ್ಲಿ ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವುದಾಗಿದೆ. ನಮ್ಮ ದೇಶ ಸಾಂಸ್ಕøತಿಕ ಪರಂಪರೆಯಿಂದ ಕೂಡಿದ್ದು, ಕಲೆ, ಸಾಹಿತ್ಯ, ಜನಪದ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಸ್ವಾಮಿ ವಿವೇಕಾನಂದರು ಚಿಕಾಗೋದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ಅದ್ಬುತವಾದ ಭಾಷಣದ ಮೂಲಕ ದೇಶದ ಪರಂಪರೆಯನ್ನು ಸಾರಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಸುಶ್ಮಾ ಗವಳಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಶಾರದಾ ಹೊಸಮನಿ ಪ್ರಾರ್ಥನೆ ಗೀತೆ ಹಾಡಿದರು. ಕ್ರೀಡಾ ಇಲಾಖೆಯ ಅಧೀಕ್ಷಕ ರಂಗನಾಥ ಕಾವಲಗೊಂಡ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net