ಪ್ರತಿಭಾವಂತ ವಿದ್ಯಾರ್ಥಿಗಳು ದೇಶದ ಆಸ್ತಿ

1001429623
Published on

ಹೊಳೆನರಸೀಪುರ: ಪ್ರತಿಭಾವಂತ ವಿದ್ಯಾರ್ಥಿಗಳು ನಿರ್ಧಿಷ್ಟ ಕ್ಷೇತ್ರಕ್ಕೆ ಸೀಮಿತವಲ್ಲ, ಅವರು ದೇಶದ ಆಸ್ತಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಲಿಂಗೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಶನಿವಾರ ನರಸೀಪುರ ದೊಡ್ಡಮನೆ ಸುಜನ ಚಾರಿಟಬಲ್ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ಜುಬಿಲಿ ಎಜುಕೇಷನ್ ಫಂಡ್ ಬೆಂಗಳೂರು ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಭವಿಷ್ಯದ ಭಾವಿ ಪ್ರಜೆಗಳೇ ಇಂದಿನ ಪ್ರತಿಭಾವಂತ ವಿದ್ಯಾರ್ಥಿಗಳು. ವಿದ್ಯಾರ್ಥಿಗಳನ್ನು ಪ್ರತಿಭಾವಂತರಾಗಿ ಹೊರಹೊಮ್ಮಿಸುವ ಚಾಕ ಚಕ್ಯತೆ, ತಂತ್ರಗಾರಿಕೆ, ಮಾರ್ಗದರ್ಶನದಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ಭವಿಷ್ಯದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಶಿಕ್ಷಕರು ನಿರ್ವಹಿಸಿದಾಗ ಮಾತ್ರ ಪ್ರತಿಭೆಗಳು ಹೊರಹೊಮ್ಮಲು ಸಾಧ್ಯ ಎಂದರು.

ವಿದ್ಯಾಭ್ಯಾಸ ಕಲಿಯುವ ಅವಧಿಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು. ಮೊಬೈಲ್ ಬಳಕೆಯನ್ನು ತ್ಯಜಿಸಬೇಕು. ಮೊಬೈಲ್‌ನಿಂದ ವೀಕ್ಷಣೆ ಮಾಡುವ ಹಲವು ದೃಶ್ಯಗಳು ಮಕ್ಕಳ ಮನಸ್ಸನ್ನು ವಿಚಲಿತಗೊಳಿಸುತ್ತವೆ. ಈ ಬೆಳವಣಿಗೆ ವಿದ್ಯಾಭ್ಯಾಸದ ಮೇಲೆ ಭಾರಿ ಪರಿಣಾಮವನ್ನು ಬೀರುತ್ತದೆ ಆದ್ದರಿಂದ ಮೊಬೈಲ್ ಬಳಕೆ ಮಾಡಬಾರದು ಎಂದು ಕಿವಿಮಾತು ಹೇಳಿದರು.

ಬಾಲ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತವಾಗಬಾರದು ಹಾಗೂ ಬಾಲಕಾರ್ಮಿಕರಾಗಬಾರದು ಎಂಬ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಪ್ರಸ್ತುತ ಮೂರು ಹಂತದ ಪರೀಕ್ಷೆಗಳನ್ನು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿದೆ. ಮೂರು ಹಂತದ ಪರೀಕ್ಷೆಗಳಲ್ಲಿ ವಿದ್ಯಾರ್ಥಿ ತೇರ್ಗಡೆಯಾಗದಿದ್ದರೆ ಹತ್ತನೇ ತರಗತಿ ಅಭ್ಯಾಸ ಮಾಡಲು ಮರಳಿ ಶಾಲೆಗೆ ಸೇರಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಬೆಂಗಳೂರಿನ ಕೆನರಾ ಬ್ಯಾಂಕ್ ಜುಬಿಲಿ ಎಜುಕೇಷನ್ ಫಂಡ್ ಅಧ್ಯಕ್ಷ ಕೆ.ಅನಂತರಾಮ್ ಭಟ್ ಮಾತನಾಡಿ, ಸಮಾಜ ಪರಿವರ್ತನೆಯಾಗುವುದು ಶಿಕ್ಷಣದಿಂದ ಮಾತ್ರ ಸಾಧ್ಯ. ಉತ್ತಮ ಶಿಕ್ಷಣ ಕಲಿತಾಗ ಮಾತ್ರ ಶೀಲವಂತರಾಗಿ ಸಮಗ್ರ ಬೆಳವಣಿಗೆ ಹೊಂದಲು ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ಅಜ್ಞಾನ ಮತ್ತು ಅಂಧಶ್ರದ್ಧೆ ದೂರ ಮಾಡಿ ಜ್ಞಾನ ಸಂಪಾದನೆ ಮಾಡುವ ಮೂಲಕ ಪ್ರತಿಭಾವಂತರಾಗಬೇಕು. ನಿಮ್ಮ ಪಾಲಕರಿಗೆ, ಶಾಲೆಗೆ, ಊರಿಗೆ ಕೀರ್ತಿ ತಂದು ಕೊಡುವಂತಹ ಗುಣವಂತರಾಗಬೇಕು ಎಂದು ಸಲಹೆ ನೀಡಿದರು.

ಸುಜನ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿ ಎನ್.ಎಸ್.ಪ್ರಕಾಶ್, ಕೆನರಾ ಬ್ಯಾಂಕ್‌ನ ನಿವೃತ್ತ ಜನರಲ್ ಮ್ಯಾನೇಜರ್ ಅನಂತಮೂರ್ತಿ, ಕೆನರಾ ಬ್ಯಾಂಕ್ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಲತಾ ಸರಸ್ವತಿ ಮಾತನಾಡಿದರು.

2025ನೇ ಸಾಲಿನ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ 19 ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಶೇಕಡ ನೂರರಷ್ಟು ಫಲಿತಾಂಶ ಪಡೆದ ತಾಲೂಕಿನ ನಾಲ್ಕು ಶಾಲೆಗಳ ಮುಖ್ಯ ಶಿಕ್ಷಕರಿಗೆ ಫಲಕ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಶಿಕ್ಷಕರಾದ ರಾಮಚಂದ್ರ, ಕೇಶವ, ಟ್ರಸ್ಟ್‌ನ ಸದಸ್ಯ ಭಾರತಿ, ಶೈಲಜಾ, ಭೀಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net