

ಕಲಬುರಗಿ : ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಆರು ಕನ್ನಡ ಮಾಧ್ಯಮ ಶಾಲೆಗಳನ್ನು ಮಾದರಿ ಸ್ಕೂಲ್‌ಗಳನ್ನಾಗಿ ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ಯೋಜನೆ ರೂಪಿಸುತ್ತಿದೆ. ಶಿಕ್ಷಕ, ಸಾಹಿತಿಗಳಿಂದ ಮಾತ್ರ ಸಮಾಜ ಪರಿವರ್ತನೆ ಸಾಧ್ಯ ಎಂದು ಪ್ರೊಬೇಷನರಿ ಐಎಎಸ್ ಅಧಿಕಾರಿ ಗಜಾನನ ಬಾಲೆ ಹೇಳಿದರು.
ಕನ್ನಡ ಭವನದ ಸುವರ್ಣ ಸಭಾ ಭವನದ ಆದರ್ಶ ಶಿಕ್ಷಕಿ ಲಿಂ.ಸಿದ್ದಮ್ಮ ಶಿವಾನಂದ ಮಠಪತಿ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದಿAದ ಗುರುವಾರ ಆಯೋಜಿಸಿದ್ದ ಒಂದು ದಿನದ ಶಿಕ್ಷಕ, ಸಾಹಿತಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿ, ಕಲ್ಯಾಣ ಕರ್ನಾಟಕದ ಸಾಹಿತಿಗಳಿಗೂ ದೊಡ್ಡ ಪ್ರಮಾಣದ ಪ್ರಾತಿನಿಧ್ಯ ಸಿಗಬೇಕು. ಆ ದಿಸೆಯಲ್ಲಿ ಈ ಭಾಗದ ಸಾಹಿತಿಗಳು ಶ್ರಮಿಸಲಿ ಎಂದು ಆಶಿಸಿದರು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ,
ಸಮಾಜದ ಸಮಸ್ಯೆ ಪರಿಹರಿಸಿ ಸಂಸ್ಕಾರಯುತ ಬದುಕು ಕಟ್ಟಿ ಬೆಳೆಸುವಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದೆ. ಕನ್ನಡದ ಉಳಿವಿಗೆ ಮಾತೃಭಾಷೆ ಶಾಲೆ ಬೆಳೆಸಬೇಕಾಗಿದೆ. ಜಿಲ್ಲೆಯ ಶಿಕ್ಷಕರನ್ನು ಒಂದೆಡೆ ಸೇರಿಸುವಂತಹ ಹೊಸ ಆಲೋಚನೆ ಈ ಕಾರ್ಯಕ್ರಮದ ಮೂಲಕ ನೆರವೇರಿಸಲಾಗಿದೆ ಎಂದರು. ವಿಜಯನಗರದ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಹಾಗೂ ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್, ಗುರೂಜಿ ಡಿಗ್ರಿ ಕಾಲೇಜಿನ ಅಧ್ಯಕ್ಷ ಕಲ್ಯಾಣಕುಮಾರ ಶೀಲವಂತ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ್ ಮಾತನಾಡಿದರು. ಪ್ರಮುಖರಾದ ಶಿವರಾಜ ಅಂಡಗಿ, ಯಶವಂತರಾಯ ಅಷ್ಟಗಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ಸೋಮಶೇಖರ ಮಠ, ಧರ್ಮಣ್ಣ ಧನ್ನಿ, ರವೀಂದ್ರಕುಮಾರ ಭಂಟನಳ್ಳಿ, ಸಿದ್ದಲಿಂಗ ಬಾಳಿ, ರೇಣುಕಾ ಡಾಂಗೆ, ಡಾ.ನಾಗೇಂದ್ರ ಮಸೂತಿ, ಪ್ರೊ.ಎಸ್.ಎಲ್.ಪಾಟೀಲ್, ವಿಶ್ವನಾಥ ತೊಟ್ನಳ್ಳಿ, ಡಾ.ಬಾಬುರಾವ್ ಶೇರಿಕಾರ ಇತರರಿದ್ದರು. ಮಹೇಶ ಹೂಗಾರ ಸಂಪಾದಕತ್ವದ ಜಿಲ್ಲೆಯ ಶಿಕ್ಷಕರು ರಚಿಸಿರುವ ಕವನಗಳನ್ನೊಳಗೊಂಡ `ಅರಿವೇ ಗುರು' ಪ್ರಾತಿನಿಧಿಕ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.