ಪ್ರತಿ ಕ್ಷೇತ್ರದಲ್ಲಿ ಪ್ರಕೃತಿ ವನ ನಿರ್ಮಾಣ

11 CRP-2A
Published on

ಚನ್ನರಾಯಪಟ್ಟಣ: ಮನುಷ್ಯನ ಜೀವನಕ್ಕೆ ಆಧುನಿಕತೆ ಸೋಗು ಶಾಪವಾಗಿ ಪರಿಣಮಿಸಿ ದಿನವಿಡೀ ಒತ್ತಡದಲ್ಲಿ ದಿನ ದೂಡುತ್ತಿದ್ದಾನೆ. ಇದಕ್ಕೆ ಮುಕ್ತಿ ನೀಡುವ ನಿಟ್ಟಿನಲ್ಲಿ ಪ್ರಕೃತಿ ವನಗಳು ಅವಶ್ಯಕವೆಂದು ಭಾವಿಸಿ ಸರ್ಕಾರ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಒಂದೊಂದು ವನ ನಿರ್ಮಾಣಕ್ಕೆ ಮುಂದಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ.ಖಂಡ್ರೆ ತಿಳಿಸಿದರು.

ಚನ್ನರಾಯಪಟ್ಟಣದ ಪ್ರಾದೇಶಿಕ ವಲಯದಡಿ ನವಿಕೃತಗೊಂಡಿರುವ ಬೆಲಸಿಂದ ಪ್ರಕೃತಿ ವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ನಮ್ಮೆಲ್ಲರ ಬಹುಮುಖ್ಯ ಆದ್ಯತೆಯಾಗಬೇಕು. ಪರಿಸರ, ಗಿಡ-ಮರಗಳೊಂದಿಗೆ ಕಾಲ ಕಳೆಯುವುದು ಉತ್ತಮ ಆರೋಗ್ಯಕ್ಕೆ ಕಾರಣವಾಗಿದೆ. ಐಷಾರಾಮಿ ಜೀವನವನ್ನು ಬಯಸಿ ನೈಸರ್ಗಿಕ ಸಂಪತ್ತನ್ನು ಯಥೇಚ್ಛವಾಗಿ ಬಳಕೆ ಮಾಡುವ ಮೂಲಕ ಪರಿಸರ ನಾಶಪಡಿಸುತ್ತಿದ್ದೇವೆ. ಎಲ್ಲೆಂದರಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ರಾಶಿ ಕಂಡುಬರುತ್ತಿದೆ. ಅಕ್ರಮ ಬಡಾವಣೆಗಳು, ಯೋಜನಾಬದ್ಧವಲ್ಲದ ನಗರಗಳ ನಿರ್ಮಾಣದಿಂದ ಪರಿಸರಕ್ಕೆ ಹಾನಿಯಾಗುತ್ತಿದೆ. ಗಾಳಿ, ನೀರು, ಆಹಾರ, ಹಾಲಿನಲ್ಲೂ ಮಾಲಿನ್ಯ ಉಂಟಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳುವ ಅವಶ್ಯಕತೆ ಇದೆ. ನಮ್ಮಗಳ ಅವಶ್ಯಕತೆಗಾಗಿ ಕಾಡು ನಾಶಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಶೇ.33 ಅರಣ್ಯ ಪ್ರದೇಶವಿರಬೇಕು ಎಂಬ ನಿಯಮವಿದೆ. ರಾಜ್ಯದಲ್ಲಿ ಶೇ.21 ಮಾತ್ರ ಅರಣ್ಯ ಪ್ರದೇಶವಿದ್ದು ಇಷ್ಟನ್ನಾದರೂ ಉಳಿಸುವ ಕೆಲಸ ಆಗಬೇಕು. ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸುವ ಮೂಲಕ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು. ವನ್ಯಜೀವಿ ಸಂರಕ್ಷಣಾ ಕಾಯ್ದೆ ಜಾರಿ ನಂತರ ರಾಜ್ಯದಲ್ಲಿ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಿದೆ. 6500 ಆನೆಗಳನ್ನು ಹೊಂದಿರುವ ಪ್ರಥಮ ರಾಜ್ಯ, 553 ಹುಲಿಗಳನ್ನು ಹೊಂದಿರುವ ಎರಡನೇ ರಾಜ್ಯ ಕರ್ನಾಟಕವಾಗಿದೆ. ವನ್ಯಜೀವಿ ಸಂರಕ್ಷಣೆ ಜತೆಗೆ ಮನುಷ್ಯನ ಜೀವವು ಅತ್ಯಮೂಲ್ಯವಾಗಿದೆ ಎಂದು ಹೇಳಿದರು.

ಸುಸ್ಥಿರ ಅಭಿವೃದ್ಧಿಯ ನಿಟ್ಟಿನಲ್ಲಿ ಜೀವನ, ಜೀವನೋಪಾಯ ಎರಡು ಮುಖ್ಯವೆಂದು ಭಾವಿಸಿ ವನ್ಯಜೀವಿಗಳಿಂದ ಆಗುವ ಅನಾಹುತಗಳನ್ನು ತಪ್ಪಿಸುವ ಸಲುವಾಗಿ ಕಾಡಂಚಿನಲ್ಲಿ ಬೇಲಿ ನಿರ್ವಾಣ, ಆನೆ ಕಂದಕಗಳ ನಿರ್ಮಾಣ, ಇಲಾಖೆಗೆ ಡ್ರೋನ್ ಕ್ಯಾಮರಾಗಳು, ವಾಹನ ಮತ್ತು ರೇಡಿಯೋ ಕಾಲರ್‌ಗಳನ್ನು ನೀಡಲಾಗಿದೆ. ಎಲಿಫೆಂಟ್ ಟಾಸ್ಕ್‌ಫೋರ್ಸ್‌ಗಳನ್ನು ನಿರ್ಮಿಸುವ ಕೆಲವಾಗಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಕಾಡಂಚಿನ ಹಳ್ಳಿಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನೀಡುವ ಕೆಲಸವನ್ನು ಸರ್ಕಾರ ಯೋಜನಾಬದ್ಧವಾಗಿ ಮಾಡುತ್ತಾ ಬಂದಿದೆ ಎಂದರು.

ಬೆಲಸಿಂದ ಪ್ರಕೃತಿ ವನದಲ್ಲಿನ 285 ಎಕರೆ ಪ್ರದೇಶದಲ್ಲಿ ಅರಣ್ಯ ಸಂಪತ್ತು ಸಂರಕ್ಷಿಸುವ ಕೆಲಸವಾಗಿದೆ. ಇಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಸೈಕ್ಲಿಂಗ್ ಟ್ರ್ಯಾಕ್, ನೇಚರ್ ವಾಕ್, ಐಲ್ಯಾಂಡ್ ವೆನ್ಯೂ, ರಾಕ್ ಗಾರ್ಡನ್, ಆಂಪಿಥಿಯೇಟರ್, ಮಕ್ಕಳ ಉದ್ಯಾನ, ಗ್ರೀನ್ ಲೈಬ್ರರಿ, ಬೋಟಿಂಗ್, ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಇದರೊಂದಿಗೆ ಮಕ್ಕಳಿಗೆ ಮರಗಳ ಹೆಸರನ್ನು ತಿಳಿಸುವ ಕೆಲಸವಾಗಬೇಕು. ಪ್ರತಿ ಮರಕ್ಕೆ ನಾಮಫಲಕ ಅಳವಡಿಸಬೇಕು. ಮಗುವೊಂದು ಕಡೇ ಪಕ್ಷ 10 ಮರಗಳ ಹೆಸರುಗಳನ್ನಾದರೂ ಹೇಳುವಂತಾಗಬೇಕು. ಮುಂದಿನ ಪೀಳಿಗೆಗೆ ಪ್ರಕೃತಿ, ಪರಿಸರ, ಸ್ವಚ್ಛತೆ ಬಗ್ಗೆ ತಿಳಿಸುವ ಆಲೋಚನೆ ಆಗದ ಹೊರತು ಪರಿಸರ ಉಳಿಸಿಕೊಳ್ಳಲಾಗದು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಪ್ರವಾಸಿ ಮಂದಿರ ನಿರ್ಮಾಣಕ್ಕೆ ಅನುದಾನ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಬೆಲಸಿಂದ ಪ್ರಕೃತಿವನದ ಅಭಿವೃದ್ಧಿಗೆ ಡಿಸಿಎಫ್ ನೇತೃತ್ವದಲ್ಲಿ ಉತ್ತಮ ಕೆಲಸ ಮಾಡಲಾಗಿದೆ. ಪಟ್ಟಣಕ್ಕೆ ಹೊಂದಿಕೊಂಡಂತಿದ್ದ ಅರಣ್ಯ ಪ್ರದೇಶವನ್ನು ಸಂರಕ್ಷಿಸುವ ಕೆಲಸ ಮಾಡುವ ನಿಟ್ಟಿನಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ಅರಣ್ಯದ ಸುತ್ತಲ್ಲೂ ಚೈನ್‌ಲಿಂಕ್ ಬೇಲಿ ಹಾಕುವ ಕೆಲಸವನ್ನು ಶಾಸಕರಾದ ಮೊದಲ ಅವಧಿಯಲ್ಲಿ ಮಾಡಿದ್ದು, ಇದೀಗ ಪ್ರವಾಸಿಗರಿಗೆ ಹತ್ತಾರು ಯೋಜನೆಗಳನ್ನು ನಿರ್ಮಾಣ ಮಾಡಿದ್ದು ಪಟ್ಟಣದ ಜನತೆ ಅನುಕೂಲ ಪಡೆದುಕೊಳ್ಳಬೇಕು ಎಂದರು.

ನಂತರ ಸಚಿವರು ಪ್ರವಾಸಿ ಮಂದಿರ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಮನವಿ ಮಾಡಿದರು. ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಪುರಸಭೆ ಅಧ್ಯಕ್ಷ ಸಿ.ಎನ್.ಮೋಹನ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಖಲಂಧರ್, ಪರಿಸರ ಪ್ರೇಮಿ ಸಿ.ಎನ್.ಅಶೋಕ್, ನಿವೃತ್ತ ವಲಯ ಅರಣ್ಯಾಧಿಕಾರಿ ಧರ್ಮಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net