ಪ್ರಜ್ಞೆಯು ಅಂತರಂಗದಲ್ಲಿ ಜಾಗ್ರತವಾಗಿರಬೇಕು

bkt-1-8
Published on
ಬಾಗಲಕೋಟೆ : ನಮ್ಮ ಜೀವನ ಶಿವ-ಜೀವನಾಗಬೇಕು. ಅರಿವಿನ ಪ್ರಜ್ಞೆಯು ಅಂತರಂಗದಲ್ಲಿ ಜಾಗ್ರತವಾಗಿರಬೇಕು. ಪವಿತ್ರ ಬದುಕಿನ ಸಂಕಲ್ಪ ಮಾಡಬೇಕು. ಸದಾ ಅಂತರಂಗದ ತುಂಬಾ ಶಿವ ಬೆಳಕು ತುಂಬಿಕೊಂಡಿರಬೇಕು ಎಂಬುದೇ ಶಿವರಾತ್ರಿಯ ಮುಖ್ಯ ಉದ್ದೇಶ. ನಾವು ಅನೇಕ ಹಬ್ಬಗಳನ್ನು ಆಚರಿಸುತ್ತೇವೆ. ಹಬ್ಬಗಳ ಉದ್ದೇಶ ಬದುಕಿನ ಜಂಜಡದಿಂದ ದೂರವಾಗಿ ಸಡಗರ ಸಂಭ್ರಮದಿಂದ ಉತ್ಸಾಹಭರಿತವಾಗಿ ಇರುವುದೇ ಆಗಿದೆ. ಅಂತರಂಗದಲ್ಲಿ ದೇವಪ್ರಜ್ಞೆ ಸದಾ ಜಾಗ್ರತವಾಗಿರುವುದೇ ಹಬ್ಬಗಳ ಮುಖ್ಯ ಉದ್ದೇಶವಾಗಿದೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಬಾಗಲಕೋಟೆ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಶ್ರೀ ಶರಣಬಸವ ಆಶ್ರಮದಲ್ಲಿ ಜರುಗಿದ ಶಿವರಾತ್ರಿ ಮಹೋತ್ಸವದ ಸಾನಿಧ್ಯವಹಿಸಿ ಮಾತನಾಡಿದ ಪೂಜ್ಯರು, ಶಿವರಾತ್ರಿ ಹಬ್ಬ ಭಾರತದ ಮೂಲೆ ಮೂಲೆಯಲ್ಲಿಯೂ ಆಚರಿಸುತ್ತಾರೆ. `ಶಿವ’ ಎಂದರೆ ಮಂಗಲ, ಶುಭ, ಬೆಳಕು, ಕಲ್ಯಾಣಕರ, ಪವಿತ್ರ, ಸಂತೋಷ ಹೀಗೆ ನಾನಾ ಅರ್ಥಗಳಿವೆ. ನಮ್ಮ ಜೀವನ ಸದಾ ಮಂಗಳವಾಗಿರಬೇಕು. ಶಿವಪ್ರಜ್ಞೆಯಿಂದ ಬೆಳಕಾಗಬೇಕು. ಸದಾ ಶಿವನೆನಹುನಿಂದ ಕೂಡಿರಬೇಕು. ಶರಣರ ದೃಷ್ಟಿಯಲ್ಲಿ ನಿತ್ಯವು ಶಿವರಾತ್ರಿಯೇ.
ಶಿವಾನುಭವ ಆಗಬೇಕಾದರೆ ಶಿವರಾತ್ರಿ ಒಂದು ದಿನದ ಸಾಧನೆ ಅಲ್ಲ. ನಿತ್ಯ ನಿತ್ಯವೂ ಶಿವರಾತ್ರಿ ಆದಾಗ ಶಿವಾನುಭವ ಆಗಲು ಸಾಧ್ಯ. ನಮ್ಮೊಳಗಿರುವ ಅಜ್ಞಾನದ ಕತ್ತಲು ಕಳೆದು, ಜ್ಞಾನದ ಬೆಳಕು ಮೂಡಿದಾಗಲೇ ನಮ್ಮಲ್ಲಿ ಸುಖ, ಶಾಂತಿ, ನೆಮ್ಮದಿಯನ್ನು ಕಾಣಲು ಸಾಧ್ಯವಾಗುತ್ತದೆ. ನಮ್ಮಲ್ಲಿ ಜ್ಞಾನದ ಬೆಳಕು ಮೂಡಬೇಕಾದರೆ, ನಮ್ಮ ಜೀವ ಜೀವನ ಶಿವಮಯ ಆಗಬೇಕು. ಅಹಂಕಾರ ಅಳಿದು; ಅಂಗ ಲಿಂಗಾಂಗವಾಗಬೇಕು. ಶಿವಯೋಗವು ; ಅಂಗವು ಲಿಂಗಾಂಗವಾಗುವಂತಹ ಶಿವಾನುಭವದ ಪ್ರಕ್ರಿಯೆಯನ್ನು ತಿಳಿಸಿಕೊಡುವ ಸಾಧನವಾಗಿದೆ.
ಈ ಶಿವಾನುಭವವನ್ನು ಕೇವಲ ಒಂದು ದಿನ ಶಿವರಾತ್ರಿಯಲ್ಲಿ ಮಾಡಿ ಅನುಭವಿಸಲು ಸಾಧ್ಯವಿಲ್ಲ. ಹಾಗಾಗಿ ಬಸವಾದಿ ಶರಣರು ಶಿವರಾತ್ರಿ, ನವರಾತ್ರಿ ಎಂದು, ಹಬ್ಬ ವಿಶೇಷತೆಗಳು ಎಂದು ಪ್ರಾಮುಖ್ಯತೆ ಕೊಡುವುದಿಲ್ಲ. ಪ್ರತಿದಿನ, ಪ್ರತಿ ಕ್ಷಣವನ್ನು ಶಿವರಾತ್ರಿ ಎಂದು ನೋಡುತ್ತಾರೆ.
ಶರಣರ ನಡೆ ನುಡಿ ಕೆಲವರಿಗೆ ವಿಚಿತ್ರವಾಗಿ ಕಂಡರೂ ಆಲೋಚಿಸಿ ಅನುಭವಿಸಿ ನೋಡಿದಾಗ ಸತ್ಯದ ದರ್ಶನ ಆಗುತ್ತದೆ. ” ಹಾವಿನ ಡೊಂಕು ಹುತ್ತಕ್ಕೆ ಸಸಿನ, ನದಿಯ ಡೊಂಕು ಸಮುದ್ರಕ್ಕೆ ಸಸಿನ, ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ “ ಎನ್ನುವಂತೆ ದೇವರನ್ನು ಮೆಚ್ಚಿಸಲು ಶರಣರ ನಡೆ ನುಡಿಗಳು ಪ್ರಿಯವಾಗಿರುತ್ತವೆ.
ಸಾಮಾನ್ಯರ ಜೀವನ ಕ್ರಮ ಮತ್ತು ಶರಣರ ಜೀವನ ಕ್ರಮವು ಒಂದೇ ತರಹ ಇರುವುದಿಲ್ಲ. ಬೇರೆ ಬೇರೆಯೇ ಆಗಿರುತ್ತದೆ. ಏಕೆಂದರೆ ಸಾಮಾನ್ಯರ ಮನಸ್ಥಿತಿಯೇ ಬೇರೆ, ಶರಣರ ಮನಸ್ಥಿತಿಯೇ ಬೇರೆ.
ಸಾಮಾನ್ಯರಿಗೆ ಹಬ್ಬ, ತೇರು, ಜಾತ್ರೆಗಳು ವಿಶೇಷ ಆಗಿರುತ್ತವೆ. ಆದರೆ ಶರಣರ ದೃಷ್ಟಿಕೋನದಲ್ಲಿ ಹಬ್ಬ, ಜಾತ್ರೆಗಳು ವಿಶೇಷವಲ್ಲ. ಎಲ್ಲಾ ಕಾಲವನ್ನು, ಎಲ್ಲರನ್ನು, ಒಂದೇ ರೀತಿಯಾಗಿ, ಸಮತ್ವದ ದೃಷ್ಟಿಯಲ್ಲಿ ನೋಡುತ್ತಾರೆ. ಏಕೆಂದರೆ ಶರಣರು ಸತ್ಯದ ಸಾಕ್ಷಾತ್ಕಾರವನ್ನು ಮಾಡಿಕೊಂಡು, ಜೀವ, ಜೀವನವನ್ನು ಶಿವಮಯ ಮಾಡಿಕೊಂಡು, ಸತ್‌ಚಿತ್ ಆನಂದದಲ್ಲಿ ಇರುವಂತವರು.
 ಏಕೆಂದರೆ ಬಸವಾದಿ ಶರಣರು ನಿತ್ಯ ಶುದ್ಧ, ನಿತ್ಯಮುಕ್ತರು. ಅವರ ಜೀವ, ಜೀವನವೇ ಶಿವಮಯವಾಗಿರುತ್ತದೆ. ಆದ್ದರಿಂದ ಬಸವಣ್ಣನವರು ” ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ,ಶರಣ ನಿದ್ದೆಗೈದರೆ ಜಪ ಕಾಣಿರೋ” ಎಂದಿದ್ದಾರೆ.
“ಶಿವ ಶರಣರು ನಿದ್ದೆಗೈದಡೆ ಜಪ ಕಾಣಿರಣ್ಣ, ಶಿವಶರಣರು ಎದ್ದಿದ್ದರೆ ಶಿವರಾತ್ರಿ ಕಾಣಿರಣ್ಣ, ಶಿವಶರಣರು ನೋಡಿದರೆ ಪಾಪಕ್ಷಯ ಕಾಣಿರಣ್ಣ, ಶಿವ ಶರಣರು ನಡೆದುದೇ ಪಾವನ ಕಾಣಿರಣ್ಣ, ಶಿವ ಶರಣರು ನುಡಿದುದೇ ಶಿವತತ್ವ, ಶಿವಮಂತ್ರ ಕಾಣಿರಣ್ಣ, ಶಿವ ಶರಣರು ಮುಟ್ಟಿದುದೇ ಸರ್ವ ಸಿದ್ದಿ ಕಾಣಿರಣ್ಣ, ಶಿವ ಶರಣರ ಮನವೇ ಲಿಂಗ ಕಾಣಿರಣ್ಣ ಶಿವ ಶರಣರ ಕಾಯವೇ ಕೈಲಾಸ ಕಾಣಿರಣ್ಣ ಗುಹೇಶ್ವರಾ ನಿಮ್ಮ ಶರಣನ ಚಾರಿತ್ರವು ವಿಪರೀತವು.” ಎಂದು ಅನುಭಾವಿ ಅಲ್ಲಮಪ್ರಭುಗಳು ಹೇಳಿದ್ದಾರೆ.
ನಾವು ಇಂತಹ ಹಂತ ತಲುಪಲು, ಜೀವ, ಜೀವನ ಶಿವಮಯವಾಗಲು, ಅಂಗ ಸರ್ವಾಂಗ ಲಿಂಗವಾಗಲು ಅನೇಕ ಶಿವರಾತ್ರಿಗಳನ್ನು ಮಾಡಬೇಕೆಂದು ಹೇಳಿದರು.
ಸಮಾರಂಭದಲ್ಲಿ ತಂಗಡಗಿಯ ಹಡಪದ ಅಪ್ಪಣ್ಣ ಗುರುಪೀಠದ ಜಗದ್ಗುರು ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳು,
ತೆಲಸಂಗ ಕುಂಬಾರ ಗುರುಪೀಠದ ಜಗದ್ಗುರು ಕುಂಬಾರ ಗುಂಡಯ್ಯ ಮಹಾಸ್ವಾಮಿಗಳು, ಶಿಕಾರಿಪುರ ವಿರಕ್ತಮಠ ಶ್ರೀ ಚನ್ನಬಸವ ಮಹಾಸ್ವಾಮಿಗಳು ಸಮ್ಮುಖವಹಿಸಿದ್ದರು. ಭಾರತೀಯ ರೈಲ್ವೆ ಪ್ರಾಧಿಕಾರದ ಸದಸ್ಯ ಅಶೋಕ ಲಿಂಬಾವಳಿ, ಭಾಜಪ ಪರಿಶಿಷ್ಟ ಜಾತಿಯ ರಾಜ್ಯ ಕಾರ್ಯದರ್ಶಿ ತುಮಕೂರಿನ ಓಂಕಾರೇಶ್ವರ. ಬದಮಿಯ ಮಂಜುನಾಥ ಕಟ್ಟಿಮನಿ, ಸಂಗನ ಗೌಡರು, ಧರ್ಮದರ್ಶಿಗಳು ಹಾಗೂ ಅಕ್ಕನ ಬಳಗದವರು ಉಪಸ್ಥಿತಿಯಿದ್ದರು.
ಕನ್ನಡ ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮೋಳಿಗೆ ಮಾರಯ್ಯ ನಾಟಕ, ಶಿವ ಭಜನೆ, ಗೀಗಿಪದ, ಜಾನಪದ ಸಂಗೀತ, ಸುಗಮ ಸಂಗೀತ, ವಚನ ಗಾಯನ, ಹಲಗಿಪದ, ಸೋಬಾನೆ ಪದ, ಭರತನಾಟ್ಯ, ಕೋಲಾಟದ ಮೂಲಕ ಶಿವರಾತ್ರಿಯನ್ನು ಆಚರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net