

ಬಾಗಲಕೋಟೆ: ವಿ.ಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಹೊರಟಿದ್ದ ಪ್ರಜಾಧ್ವನಿ ಯಾತ್ರೆಯ ಬಸ್‌ಗೆ ಕರವೇ ಜಿಲ್ಲಾ ಘಟಕದ ಕಾರ್ಯಕರ್ತರು ಅಡ್ಡಗಟ್ಟಿದ ಘಟನೆ ನಗರದ ಹೆಲಿಪ್ಯಾಡ್‌ನಲ್ಲಿ ಬುಧವಾರ ನಡೆದಿದೆ.
ಬಾಗಲಕೋಟೆಗೆ ಘೋಷಣೆಯಾಗಿರುವ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿ ಕರವೇ ಕಾರ್ಯಕರ್ತರು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲು ಆಗಮಿಸಿದ್ದರು. ಹೆಲಿಪ್ಯಾಡನಲ್ಲಿ ಮನವಿ ಸ್ವೀಕರಿಸಲು ನಿರಾಕರಣೆ ಮಾಡುತ್ತಿದ್ದಂತೆ ಕರವೇ ಕಾರ್ಯಕರ್ತರು ಸಿದ್ದರಾಮಯ್ಯ ಅವರಿಗೆ ಘೇರಾವ ಹಾಕಿದರು. ಬಸ್ ಮುಂದೆ ಕುಳಿತುಕೊಂಡರು. ಪ್ರಜಾಧ್ವನಿ ಯಾತ್ರೆ ಅಂದ್ರೆ ಏನು ಅಂತ ಪ್ರಶ್ನಿಸಿದರು. ಆ ಬಳಿಕ ಸಿದ್ದರಾಮಯ್ಯ ಮತ್ತೆ ಬಸ್ ಬಾಗಿಲಿನಲ್ಲಿ ನಿಂತು ಕರವೇ ಕಾರ್ಯಕರ್ತರ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಮಾತನಾಡಿ, ಈಗ ಮಾಡೋಕೆ ಸಾಧ್ಯ ಆಗುತ್ತಾ? ಅದನ್ನ ನಾನೇ ಘೋಷಣೆ ಮಾಡಿದ್ದ. ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಖಂಡಿತ ಮೆಡಿಕಲ್ ಕಾಲೇಜು ಮಾಡಿಕೊಡುತ್ತೇನೆ ಅಂತ ಭರವಸೆ ನೀಡಿದ ಬಳಿಕ ಕರವೇ ಕಾರ್ಯಕರ್ತರರು ಸಮಾಧಾನಗೊಂಡರು. ನಂತರ ಬಸ್ ಮುಂದೆ ಹೊರಟಿತು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ, ಆತ್ಮರಾಮ ನೀಲನಾಯಕ ಇತರರು ಇದ್ದರು.