ಪ್ರಕೃತಿ ಮಾತೆ ರಕ್ಷಣೆ ಎಲ್ಲರ ಹೊಣೆ

5sdp1
Published on

ಸಿದ್ದಾಪುರ: ಮನುಷ್ಯನ ಸ್ವಾರ್ಥದಿಂದ ಪರಿಸರ ನಾಶವಾಗುತ್ತಿದೆ. ಪ್ರಕೃತಿ ಮಾತೆಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಗಿಡಮರಗಳ ರಕ್ಷಣೆ ಜತೆಗೆ ಅವುಗಳ ಬೀಜಗಳನ್ನು ಸಂರಕ್ಷಣೆ ಮಾಡುವುದು ಮುಖ್ಯವಾಗಿದೆ ಎಂದು ತಹಸೀಲ್ದಾರ್ ಮಂಜುಳಾ ಎಸ್. ಭಜಂತ್ರಿ ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಮೀಪದ ಹೆಗ್ಗಾರಳ್ಳಿ ಬೆಟ್ಟದಲ್ಲಿ ಭಾರತಿ ಸಂಪದ, ಅರಣ್ಯ ಇಲಾಖೆ, ಸಂಸ್ಕೃತಿ ಸಂಪದ ಹಾಗೂ ಪ್ರಯೋಗ ಸ್ವಯಂ ಸೇವಾ ಸಂಸ್ಥೆ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಹಸಿರು ನೆಟ್ಟು ಭುವಿಗೆ ಕಾಡು ಬೀಜ ಇಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಮಾತನಾಡಿ, ಪರಿಸರ ನಾಶವಾದರೆ ಏನಾಗುತ್ತದೆ ಎನ್ನುವುದರ ಕುರಿತು ಈಗಾಗಲೆ ವಿಶ್ವದಾದ್ಯಂತ ಕಾಣಿಸಿಕೊಂಡ ರೋಗಗಳಿಂದ ತಿಳಿದುಕೊಳ್ಳಬಹುದಾಗಿದೆ. ಮಲೆನಾಡಿನ ಸಮೃದ್ಧ ಕಾಡನ್ನು ಉಳಿಸುವುದಕ್ಕಾಗಿ ಕಾಡು ಬೀಜಗಳನ್ನು ಸಂಗ್ರಹಿಸಿ ಅವುಗಳನ್ನು ಸಂರಕ್ಷಿಸುತ್ತಿರುವ ಗಣಪತಿ ಹೆಗಡೆ ವಡ್ಡಿನಗದ್ದೆ ಅವರ ಪರಿಶ್ರಮ ಮೆಚ್ಚುವಂಥದ್ದು ಎಂದರು.

ಆರ್​ಎಫ್​ಒ ಶಿವಾನಂದ ನಿಂಗಾಣಿ, ಸಿಪಿಐ ಪ್ರಕಾಶ, ಪತ್ರಕರ್ತ ನಾಗರಾಜ ನಾಯ್ಕ ಮಾಳ್ಕೋಡ, ಪರಿಸರ ತಜ್ಞ ಎಂ.ಬಿ. ನಾಯ್ಕ ಕಡಕೇರಿ, ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಸ್ವಾಮಿ, ಅಶೋಕ ರಾಠೋಡ ಹಾಗೂ ಊರಿನ ಜನರು ಇದ್ದರು.

ಕಾರ್ಯಕ್ರಮದ ಪೂರ್ವದಲ್ಲಿ ಗಣಪತಿ ಹೆಗಡೆ ವಡ್ಡಿನಗದ್ದೆ ಅವರು ಎಲ್ಲರಿಗೂ ಕವಳಿ ಹಣ್ಣನ್ನು ನೀಡಿ ಸ್ವಾಗತಿಸಿದರು. ಬಳಿಕ ತಾವು ಸಂಗ್ರಹಿಸಿದ ವಿವಿಧ ತಳಿಗಳ ಬೀಜಗಳ ಕುರಿತು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net