

ಬಾಗಲಕೋಟೆ: ಸ್ವಾತಂತ್ರ‍್ಯೋತ್ಸವದ ಅಂಗವಾಗಿ ಕಾರ್ಮಿಕ ಇಲಾಖೆಯಿಂದ ಜಿಲ್ಲೆಯಾದ್ಯಂತ ಆ.೩೧ ವರೆಗೆ ಹಮ್ಮಿಕೊಂಡಿರುವ ಪ್ಯಾನ್ ಇಂಡಿಯಾ, ಮಕ್ಕಳ ಮತ್ತು ಹದಿಹರೆಯದ ಕಾರ್ಮಿಕರ ಪುನರ್ ವಸತಿ ಕುರಿತು ಜಾಗೃತಿ ಅಭಿಯಾನಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎನ್.ವಿ.ವಿಜಯ ಚಾಲನೆ ನೀಡಿದರು.
ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬಾಲ ಕಾರ್ಮಿಕ ನಿರ್ಮೂಲನೆಗೆ ಕಠಿಣ ಕಾನೂನುಗಳು ಇದ್ದರೂ ಸಹ. ಇನ್ನು ಹೋಟೆಲ್, ಪೆಟ್ರೋಲ್ ಬಂಕ್ ಹಾಗೂ ಇತರೆ ಸ್ಥಳಗಳಲ್ಲಿ ಬಾಲಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಲಾಖೆಯವರು ಕಾನೂನನ್ನು ಸಮರ್ಪಕ ಅನುಷ್ಠಾನಗೊಳಿಸುವ ಮೂಲಕ ಕಠಿಣ ಕ್ರಮಗಳನ್ನು ಕೈಗೊಂಡು ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಪಣ ತೊಡಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪುರ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಜಿಲ್ಲಾ ಬಾಲ ಕಾರ್ಮಿಕ ಯೋಜನೆ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ, ವಕೀಲರ ಸಂಘದ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.