ಪೌರಾಣಿಕ ನಾಟಕಗಳು ಜಾತಿಗೆ ಸೀಮಿತವಾಗದಿರಲಿ

Oplus_131072
Oplus_131072
Published on

ನಂಜನಗೂಡು: ಪೌರಾಣಿಕ ನಾಟಕಗಳು ಮುಂದಿನ ಪೀಳಿಗೆಗೆ ಸಾಂಪ್ರದಾಯಿಕ ಕಲೆಯಾಗಿ ಉಳಿಯಬೇಕಾದರೆ ಸರ್ಕಾರ ಗ್ರಾಮೀಣ ಭಾಗದ ನಾಟಕಗಳಿಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಹೇಳಿದರು.

ನಂಜನಗೂಡು ಪಟ್ಟಣದ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಗುರುವಾರ ರಾತ್ರಿ ಇಂಪು ಇಂಚರ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ಕಿರುಗುಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಿಂಧುವಳ್ಳಿಪುರ ಲೋಕೇಶ್ ವಿರಚಿತ ‘ಸರ್ಪಲಾಂಚನ ಅಥವಾ ಪರಮಾತ್ಮನನ್ನು ಮರೆತ ಪಾಂಡವರು’ ಎಂಬ ಪೌರಾಣಿಕ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ದಶಕಗಳ ಹಿಂದೆ ಗ್ರಾಮಾಂತರ ಪ್ರದೇಶದಲ್ಲಿ ನಾಟಕ ಪ್ರದರ್ಶನಗಳು ನಡೆಯುತ್ತಿದ್ದವು. ಪ್ರದರ್ಶನಗಳ ಹಿಂದೆ ಸಮಾಜದ ಅಂಕುಡೊಂಕು ತಿದ್ದುವ ಉದ್ದೇಶ ಇರುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಆ ಕೆಲಸವನ್ನು ಸಾಮಾಜಿಕ ಕಥಾಹಂದರ ಒಳಗೊಂಡ ನಾಟಕಗಳು ನಿಭಾಯಿಸಿದವು. ಇತ್ತೀಚಿನ ದಿನಗಳಲ್ಲಿ ನಿರ್ದಿಷ್ಟ ಜಾತಿ ಸೂಚಕ ಶೀರ್ಷಿಕೆಯನ್ನು ಒಳಗೊಂಡ ನಾಟಕಗಳು ಬರುತ್ತಿವೆ. ನಾಟಕಗಳು ಒಂದು ಜಾತಿಗೆ ಸೀಮಿತಗೊಂಡರೆ ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಿಸಲು ಸಾಧ್ಯವಾಗುವುದಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿಯಬೇಕು. ಎಲ್ಲ ಸಮುದಾಯದ ಕಲಾವಿದರು ಸೇರಿ ನಾಟಕ ಪ್ರದರ್ಶನ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಸಮಾಜ ಸೇವಕ ಎಂ.ಮಹದೇವಯ್ಯ ಮಾತನಾಡಿ, ಇಂತಹ ಕಾರ್ಯಕ್ರಮ ನಿರಂತರವಾಗಿ ನಡೆಯಲು ನಂಜನಗೂಡು ತಾಲೂಕಿನಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣದ ಅಗತ್ಯವಿದೆ ಎಂದು ಹೇಳಿದರು.

ತಾಪಂ ಮಾಜಿ ಅಧ್ಯಕ್ಷ ನಾಗೇಶ್ ರಾಜು, ತಾಪಂ ಮಾಜಿ ಉಪಾಧ್ಯಕ್ಷ ಸಿ.ಎಂ.ಮಹದೇವಯ್ಯ, ಉಪ್ಪನಹಳ್ಳಿ ಶಿವಣ್ಣ, ದಿನೇಶ ಮಾಕನಪುರ, ಬಸವಟ್ಟಿಗೆ ಜವರಯ್ಯ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net