ಪೌರಕಾರ್ಮಿಕರ ಸೇವೆ ಕಾಯಂ ಮಾಡಿ

kattada karmika
Published on

ಕಲಬುರಗಿ: ಮಹಾನಗರ ಪಾಲಿಕೆಯಲ್ಲಿ ಸೇವಾ ಹಿರಿತನದ ಆಧಾರದ ಮೇಲೆ ೩೪೫ ದಿನಗೂಲಿ ಪೌರ ಕಾರ್ಮಿಕರರ ಸೇವೆ ಕಾಯಂ ಮಾಡಬೇಕು ಎಂದು ಮಹಾನಗರ ಪಾಲಿಕೆ ಪೌರಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಶಿವಶರಣಪ್ಪ ಹೊಸ್ಮನಿ ಆಗ್ರಹಿಸಿದರು. ಪಾಲಿಕೆಯಲ್ಲಿ ೧೯೯೪ರಿಂದ ೨೦೨೦ರವರೆಗೆ ಸೇವೆ ಸಲ್ಲಿಸುತ್ತಿರುವ ನಾವು ೨೦೧೭-೧೮ರಲ್ಲಿ ಪೌರಕಾರ್ಮಿಕರ ಕಾಯಂ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಿದಾಗ ನಮ್ಮ ಹಿರಿತನ ಕಡೆಗಣಿಸಿ, ೧೩೨ ಬೇರೆ ದಿನಗೂಲಿ ಜನರನ್ನು ನೇಮಕ ಮಾಡಿಕೊಂಡಿರುವ ಕ್ರಮ ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ಗೆ ಮೊರೆ ಹೋಗಿ ತಡೆಯಾಜ್ಞೆ ತರಲಾಗಿತ್ತು. ಪ್ರಾದೇಶಿಕ ಆಯುಕ್ತರು ೧೩೨ ಜನ ತಾತ್ಕಾಲಿಕ ಪೌರಕಾರ್ಮಿಕರ ಹೆಸರು ಆಯ್ಕೆ ಪಟ್ಟಿಯಿಂದ ರದ್ದುಪಡಿಸಿ ಎಂದು ಇಲಾಖೆ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಆದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ೨೦೨೧ರಲ್ಲಿ ನೇರ ನೇಮಕಾತಿ ಆಯ್ಕೆಯಾಗಿರುವ ೧೩೨ ಪೌರ ಕಾರ್ಮಿಕರನ್ನು ಆಯ್ಕೆ ಪಟ್ಟಿಯಿಂದ ರದ್ದುಪಡಿಸಿ ಹಿರಿತನದ ಆಧಾರದ ಮೇಲೆ ೩೪೫ ದಿನಗೂಲಿ ಪೌರಕಾರ್ಮಿಕರ ಸೇವೆ ಕಾಯಂಗೊಳಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಂಘದ ಅಧ್ಯಕ್ಷೆ ಭಾರತಿಬಾಯಿ ಹತ್ತರಕಿ, ಎಸ್.ಎಸ್.ತಾವಡೆ, ಶಿವಶರಣಪ್ಪ ಹೊಸಮನಿ, ತಿಪ್ಪಣ್ಣ ಬಳಿಚಕ್ರ, ರಾಣೋಜಿ ಒಮನಕರ್, ಶಿವಕುಮಾರ್ ಮುಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net