

ಬಾಗಲಕೋಟೆ: ನಗರದ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಪೌರ ನೌಕರರ ಸಂಘ, ಕರ್ನಾಟಕ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘದ ನೇತೃತ್ವದಲ್ಲಿ ಪೌರ ಕಾರ್ಮಿಕರು ನಗರಸಭೆ ಎದುರು ಹೋರಾಟ ಆರಂಭಿಸಿದ್ದಾರೆ.
ನವನಗರದ ನಗರಸಭೆ ಎದುರು ಶಾಮೀಯಾನ ಹಾಕಿ ಧರಣಿ ಆರಂಭಿಸಿದ ಪೌರ ಕಾರ್ಮಿಕರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ವಿ.ಪ ಸದಸ್ಯ ಪಿ.ಎಚ್.ಪೂಜಾರ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ಬಗ್ಗೆ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುರಿಸುತ್ತಿದೆ. ಸರ್ಕಾರಿ ನೌಕರರೆಂದು ಪರಿಗಣಿಸುತ್ತಿಲ್ಲ. ಹೊರ ಗುತ್ತಿಗೆ ಆಧಾರ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸುತ್ತಿಲ್ಲ. ಅನೇಕ ಸಮಸ್ಯೆ, ಸವಾಲುಗಳ ನಡುವೇ ಜೀವನ ಸಾಗಿಸುವಂತಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೀರು ಸರಬರಾಜು ಸಹಾಯಕರು, ವಾಹನ ಚಾಲಕರು, ಬೀದಿ ದೀಪ ನಿರ್ವಹಣೆಕಾರರು, ಪಾರ್ಕ ಗಾರ್ಡನರ್, ಕಾವಲುಗಾರ, ಸ್ಯಾನಿಟರಿ ಸೂಪರವೈಜರ್ ವಿವಿಧ ವೃಂದಗಳಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ನೇರ ನೇಮಕಾತಿಗೆ ಒಳಪಡಿಸಬೇಕು, ದಿನಗೂಲಿ ಕ್ಷೇಮಾಭಿವೃದ್ಧಿ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಏಳನೇ ವೇತನ ಆಯೋಗದ ಸಾಲಿನಲ್ಲಿ ನೇಮಕಾತಿಗೊಂಡ ಪೌರ ಕಾರ್ಮಿಕರು, ಲೋಡರ್ಸ ಕ್ಲೀನರ್ಸ, ವೇತನವನ್ನು ಎಸ್‌ಎ-Àಸಿ ವೇತನ ಅನುದಾನದಡಿಯಲ್ಲಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಂಗಳೇಶ ಪೂಜಾರಿ, ಡಿ.ಕೆ.ಜಮಖಂಡಿ, ರಂಜಾನಾ ಬಾದಾಮಿ, ಮಾಹಲಿಂಗಪ್ಪ ಸುಮೇರ, ಕನಕಗಿರಿ ಮಿರ್ಜಿ, ಡಿ.ಡಿ.ಹಗೆದಾಳ, ಶಿವಮೂರ್ತೆಪ್ಪ ಜುಮ್ಮನಕಟ್ಟಿ, ರವಿ ಹುಲಸಪ್ಪಗೋಳ ಇತರರು ಇದ್ದರು.