

ವಿಜಯವಾಣಿ *ಸುದ್ದಿಜಾಲ ಕಾರವಾರ
ಬಾಂಬ್ ಹಾಕುವುದಾಗಿ ಪೋಸ್ಟ್ ಕಾರ್ಡ್ ನಲ್ಲಿ ಹುಸಿ ಬೆದರಿಕೆ ಪತ್ರವೊಂದು ಭಟ್ಕಳ ಪೊಲೀಸ್ ಠಾಣೆ ತಲುಪಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬೆದರಿಕೆ ಕಾರ್ಡ್ ಬರೆದ ಆರೋಪಿ ಹೊಸಪೇಟೆಯ ಹನುಮಂತಪ್ಪ ಎಂಬಾತನನ್ನು ಚೆನ್ನೈ ಪೊಲೀಸರು ಈಗಾಗಲೇ ಬಂಧಿಸಿದ್ದು, ಆತನನ್ನು ವಶಕ್ಕೆ ಪಡೆಯಲು ಭಟ್ಕಳ ಪೊಲೀಸರು ಕಾನೂನು ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.
"ಚೆನ್ನೈ ಕಲೆದಾ-9840101014 8248838351 ನೆಕ್ಟ್ಸ್ ಟಾರ್ಗೆಟ್ ಡಿಸೆಂಮಬರ್ 25 ಆ್ಯಾಂಡ್ ಹೆಪಿ ನ್ಯೂ ಇಯರ್ 2023 ಬ್ಲಾಸ್ಟ್" ಎಂದು ಇಂಗ್ಲಿಷ್ ನಲ್ಲಿ ಬರೆದ ಪೋಸ್ಟ್ ಕಾರ್ಡ್ ಡಿಸೆಂಬರ್ ನಲ್ಲಿ ಭಟ್ಕಳ ಪೊಲೀಸ್ ಠಾಣೆಗೆ ತಲುಪಿತ್ತು. ಸೂಕ್ಷ್ಮ ವಿಷಯವಾಗಿದ್ದರಿಂದ ವಿಷಯವನ್ನು ಬಹಿರಂಗ ಮಾಡದೇ ಪೊಲೀಸರು ತನಿಖೆ ನಡೆಸಿದ್ದರು. ಪೋಸ್ಟ್ ಕಾರ್ಡ್ ಧರ್ಮಸ್ಥಳದಿಂದ ಪೋಸ್ಟ್ ಆಗಿದ್ದು, ಭಯೋತ್ಪಾದಕ ಚಟುವಟಿಕೆಗೂ ಇದಕ್ಕೂ ಯಾವುದೇ ಲಿಂಕ್ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕಳ್ಳನ ಕಿತಾಪತಿ
ಇದೇ ರೀತಿ ಪೋಸ್ಟ್ ಕಾರ್ಡ್ ಬೆದೆಕೆಗೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಹೊಸಪೇಟೆಯ ಕಮಲಾಪುರದ ಹನುಮಂತಪ್ಪನನ್ನು ಬಂಧಿಸಿದ್ದಾರೆ. ಆರೋಪಿ ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ಟಾಪ್ ಕಳ್ಳತನ ಮಾಡಿ ಚೆನ್ನೈನ ಅಂಗಡಿಯೊಂದಕ್ಕೆ ತೆರಳಿ ಅದನ್ನು ಮಾರಲು ಹೋಗುತ್ತಾನೆ. ಅಂಗಡಿ ಮಾಲೀಕ ಲ್ಯಾಪ್‌ಟಾಪ್ ಪಾಸ್‌ವರ್ಡ್ ಕೇಳಿದಾಗ ಹನುಮಂತಪ್ಪ ಗಲಿಬಿಲಿಗೊಂಡಿದ್ದ. ಇದರಿಂದ ಅನುಮಾನ ಬಂದು ಐಡಿ ಕಾರ್ಡ್ ಕೊಡು ಎಂದು ಕೇಳಿದ್ದ. ಇಲ್ಲೇ ಇದ್ದರೆ ತಾನು ಸಿಕ್ಕಿಕೊಳ್ಳುವುದು ಖಂಡಿತ ಎಂದು ಓಡಿ ಪರಾರಿಯಾಗಿದ್ದ. ನಂತರ ಅಂಗಡಿ ಮಾಲೀಕನಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ. ತನ್ನ ಬಗ್ಗೆ ಯಾವುದೇ ಮಾಹಿತಿ ನೀಡದಂತೆ ಸೂಚಿಸಿದ್ದ. ಆದರೂ ಅಂಗಡಿ ಮಾಲೀಕ ಸುಮ್ಮನಿರಲಾರ ಎಂಬ ಸಿಟ್ಟಿಗೆ ಆತನ ಮೊಬೈಲ್ ನಂಬರ್ ಹಾಕಿ ಹುಸಿ ಬಾಂಬ್ ಬೆದರಿಕೆ ಪತ್ರ ಹಾಕಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.
ಆತನೇ ಭಟ್ಕಳಕ್ಕೂ ಬಾಂಬ್ ಬೆದರಿಕೆ ಪತ್ರ ಬರೆದಿದ್ದಾನೆ ಎಂಬ ಮಾಹಿತಿ ಇದ್ದು, ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿದೆ. ಚೆನ್ನೈ ನ್ಯಾಯಾಲಯದಿಂದ ಬಾಡಿ ವಾರಂಟ್ ಮೇಲೆ ಆತನನ್ನು ಪಡೆಯುವ ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಆತನ ವಿಚಾರಣೆಯ ನಂತರ ಹೆಚ್ಚಿನ ಅಂಶಗಳು ಬೆಳಕಿಗೆ ಬರಲಿವೆ ಎಂದು ಎಎಸ್‌ಪಿ ಸಿ.ಟಿ.ಜಯಕುಮಾರ್ ತಿಳಿಸಿದ್ದಾರೆ.