ಪೋಷಕಾಂಶಯುಕ್ತ ಆಹಾರ ಸೇವಿಸುವುದು ಅಗತ್ಯ

bkt-30-5
ಬಾಗಲಕೋಟೆ ತಾಲೂಕಿನ ಬೇವಿನಮಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಶಾಸಕ ಎಚ್.ವೈ.ಮೇಟಿ ಚಾಲನೆ ನೀಡಿದರು.
Published on

ಬಾಗಲಕೋಟೆ: ವಿದ್ಯಾರ್ಥಿಗಳ ಬೌದ್ಧಿಕ ಮತ್ತು ದೈಹಿಕ ಸದೃಢತೆಗಾಗಿ ಪೂರಕ ಪೋಷಕಾಂಶಯುಕ್ತ ಆಹಾರ ಸೇವಿಸುವುದು ಅಗತ್ಯ ಇದೆ ಎಂದು ಶಾಸಕ ಎಚ್.ವೈ.ಮೇಟಿ ಹೇಳಿದರು.

ತಾಲೂಕಿನ ಬೇವಿನಮಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಉನ್ನತೀಕರಿಸಿದ ಪ್ರೌಢ ಶಾಲೆಯಲ್ಲಿ ಸೋಮವಾರ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ಹಾಗೂ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪೌಷ್ಠಿಕಾಂಶ ಕಡಿಮೆ ಹೊಂದಿರುವ ಮಕ್ಕಳಿಗೆ ಉತ್ತಮ ಆರೋಗ್ಯ ಹೊಂದಲು ಮೊಟ್ಟೆ, ಬಾಳೆಹಣ್ಣು ಶೇಂಗಾಚಿಕ್ಕಿ ಸೇವನೆ ಮಾಡುವುದರಿಂದ ಮಕ್ಕಳು ಆರೋಗ್ಯವಂತರಾಗುವರು. ಮೊದಲು ವಾರಕ್ಕೆ ಎರಡು ದಿನ ಮೊಟ್ಟೆ, ಬಾಳೆಹಣ್ಣು ಶೇಂಗಾಚಿಕ್ಕಿ ನೀಡುತ್ತಿದ್ದೇವು. ಈಗ ಅಜೀಮ್ ಪ್ರೇಮ್ ಜೀ ಫೌಂಡೇಷನ್ ಸಹಕಾರದಿಂದ ವಾರದ ಆರೂ ದಿನವೂ ಮೊಟ್ಟೆ ತಿನ್ನುವವರಿಗೆ ಮೊಟ್ಟೆ, ಮೊಟ್ಟೆ ತಿನ್ನದವರಿಗೆ ಬಾಳೇಹಣ್ಣು, ಶೇಂಗಾಚಿಕ್ಕಿ ನೀಡುವ ಯೋಜನೆ ಇದಾಗಿದೆ. ಮೊಟ್ಟೆ ಹಲವಾರು ಪೌಷ್ಠಿಕಾಂಶ ಹೊಂದಿರುವ ಆಹಾರವಾಗಿದ್ದು ಎಲ್ಲರೂ ಸೇವಿಸಬಹುದಾಗಿದೆ ಎಂದರು.

ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗರಾಜ ಪಿ., ಮಾತನಾಡಿ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಬಾಗಲಕೋಟೆ ತಾಲೂಕಿನಲ್ಲಿ ೩೨,೨೨೫ ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ. ತಿಂಗಳಿಗೆ ೭,೭೩,೪೦೦ ಮೊಟ್ಟೆಗಳು ಅವಶ್ಯವಾಗಿದ್ದು ತಾಲೂಕಿನ ಎಲ್ಲ ಮಕ್ಕಳು ಪೌಷ್ಠಿ ಆಹಾರ ಸೇವಿಸಬೇಕು ಎಂದು ಹೇಳಿದರು.

ಸಹಕಾರ ಯುನಿಯನ್ ಬ್ಯಾಂಕ್ ಅಧ್ಯಕ್ಷ ದ್ಯಾಮಣ್ಣ ಗಾಳಿ ಮಾತನಾಡಿ, ಸರ್ಕಾರದೊಂದಿಗೆ ಸಹಕರಿಸಿ ರಾಜ್ಯದ ೫೫ ಲಕ್ಷ ಮಕ್ಕಳಿಗೆ ಸತತ ಮೂರ ವರ್ಷಗಳ ಅವಽಗೆ ೧೫೯೮ ಕೋಟಿ ರೂಪಾಯಿ ಅನುದಾನದಲ್ಲಿ ಈ ಸೌಲಭ್ಯ ಕಲ್ಪಿಸುತ್ತಿರುವ ಅಜೀಮ್ ಪ್ರೇಮ್ ಜೀ ಅವರಿಗೆ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ರುಕ್ಮವ್ವ ಗೌಡರ, ಎಸ್.ಡಿ.ಎಂ.ಸಿ ಅಧ್ಯಕ್ಷ ಬಸವರಾಜ ಸೂಳೀಕೇರಿ, ಮುಖಂಡರಾದ ಹೊಳಬಸು ಶೆಟ್ಟರ, ಸಿದ್ದಣ್ಣ ರಾಂಪೂರ, ಡಿವೈಪಿಸಿ ಸಿ.ಆರ್.ಓಣಿ, ಎಪಿಸಿ ಎಸ್. ಕೆ.ಕಲ್ಲೂರ, ವಿಷಯ ಪರಿವೀಕ್ಷಕ ಎಸ್.ಎಸ್.ಹಾಲವರ್, ವೈ.ಡಿ.ಕಿರಸೂರ, ಸಿ.ಎಸ್ ಹಳ್ಳೂರ, ಎಚ್.ಎಂ.ಲಾಯದಗುಂದಿ, ಎಂ.ಬಿ. ಬಾಲರಡ್ಡಿ, ಎಸ್.ಬಿ.ಹಿರೇಮಠ ಇದ್ದರು. ರಾಜಕುಮಾರ ಸಿಂಹಾಸನ ನಿರೂಪಿಸಿದರು, ಸಲೀಮ ತಹಸೀಲ್ದಾರ ವಂದಿಸಿದರು. ಸಿ.ಬಿ.ಉಳ್ಳಾಗಡ್ಡಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net