ಪೊಲೀಸ್ ಫೀಡ್‌ಬ್ಯಾಕ್ ತಂತ್ರಾಂಶಕ್ಕೆ ಚಾಲನೆ

Police Rate
Published on

ಕಲಬುರಗಿ: ಸಮಸ್ಯೆ ಪರಿಹಾರ, ನ್ಯಾಯಕ್ಕಾಗಿ ದೂರು ಸಲ್ಲಿಸಲು, ವ್ಯಾಜ್ಯ ಪರಿಹಾರಕ್ಕಾಗಿ ಪೊಲೀಸ್ ಠಾಣೆಗೆ ಬರುವವರೊಂದಿಗೆ ಜನಸ್ನೇಹಿಯಾಗಿ ವರ್ತಿಸುವುದು ಪೊಲೀಸರ ಕರ್ತವ್ಯ. ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಸುಧಾರಣೆ ಮಾಡುವ ಉದ್ದೇಶದಿಂದ ಜನಸ್ನೇಹಿ ಪೊಲೀಸ್ ಅಭಿಯಾನ ಆರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ನಗರದ ಪೊಲೀಸ್ ಭವನದಲ್ಲಿ ಜನಸ್ನೇಹಿ ಅಭಿಯಾನ ಅಂಗವಾಗಿ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸಾರ್ವಜನಿಕರೊಂದಿಗೆ ಸ್ಪಂದಿಸುವ ಕುರಿತು ಸಾರ್ವಜನಿಕರೇ ಮುಕ್ತವಾಗಿ ಪ್ರತಿಕ್ರಿಯಿಸುವ ಪೊಲೀಸ್ ಫೀಡ್‌ಬ್ಯಾಕ್ ಆ್ಯಪ್ ಕ್ಯೂ ಆರ್ ಕೋಡ್ ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಪಾರದರ್ಶಕತೆ, ಕರ್ತವ್ಯ ಪ್ರಜ್ಞೆ ಜತೆಗೆ ನಮ್ಮ ವರ್ತನೆ ಸರಿ ಇದ್ದಾಗ ಮಾತ್ರ ಜನಸಾಮಾನ್ಯರು ನಮ್ಮನ್ನು ನಂಬುತ್ತಾರೆ ಎಂದರು.
ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿಯಾಗಿಸುವತ್ತ ಮಹತ್ವಾಕಾಂಕ್ಷಿ ಹೆಜ್ಜೆ ಇರಿಸಲಾಗಿದೆ. ಸಮಸ್ಯೆಗಳ ಪರಿಹಾರಕ್ಕಾಗಿ ಠಾಣೆಗೆ ಬರುವ ಜನಸಾಮಾನ್ಯರು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ವರ್ತನೆ ಕುರಿತು ಕ್ಯೂ ಆರ್ ಕೋಡ್ ಮೂಲಕ ದಾಖಲಿಸಬಹುದು. ಕ್ಯೂ ಆರ್ ಕೋಡ್ ಅನ್ನು ಕಲಬುರಗಿ ನಗರದ ಮತ್ತು ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ಕಡ್ಡಾಯ ಸಾರ್ವಜನಿಕರಿಗೆ ಕಾಣುವಂತೆ ಪ್ರವೇಶ ದ್ವಾರದಲ್ಲಿ ಪೋಸ್ಟರ್ ಅಂಟಿಸಬೇಕು. ಜಿಲ್ಲೆಯ ಸಾರ್ವಜನಿಕ ಪ್ರದೇಶಗಳಲ್ಲಿ ಲಗತ್ತಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಅಲ್ಲಮಪ್ರಭು ಪಾಟೀಲ್ ಮತ್ತು ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಮಾತನಾಡಿದರು. ಎಸ್‌ಪಿ ಇಶಾ ಪಂತ್ ಅವರು ಕ್ಯೂ ಆರ್ ಕೋಡ್ ಕುರಿತು ವಿವರಿಸಿದರು. ಡಿಐಜಿ ಅನುಪಮ್ ಅಗ್ರವಾಲ್, ನಗರ ಪೊಲೀಸ್ ಆಯುಕ್ತ ಚೇತನ್ ಆರ್, ಡಿಸಿಪಿ ಅಡ್ಡೂರು ಶ್ರೀನಿವಾಸಲು , ಡಿಸಿ ಫೌಜಿಯಾ ತರನ್ನುಮ್, ಜಿಪಂ ಸಿಇಒ ಭಂವರ್‌ಸಿAಗ್ ಮೀನಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net