ಪೊಲೀಸ್ ದೌರ್ಜನ್ಯಕ್ಕೆ ಮತ್ತಿಮಡು ಕಿಡಿ

Basavaraj Mattimadu
Published on

ಕಲಬುರಗಿ: ಜೇವರ್ಗಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಹೊರಗಡೆ ನಿಂತಿದ್ದ ನನ್ನ ಮೇಲೆ ಎಎಸ್‌ಪಿ ಮಹೇಶ ಮೇಘಣ್ಣನವರ ಅಂಗಿ ಹಿಡಿದು ಅನುಚಿತವಾಗಿ ವರ್ತಿಸಿ ಅಗೌರವ ತೋರಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳು ಗೌರವ ನೀಡುತ್ತಿಲ್ಲ ಎಂದು ಶಾಸಕ ಬಸವರಾಜ ಮತ್ತಿಮಡು ಕಿಡಿಕಾರಿದರು.

ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಜಿಲ್ಲೆಯಲ್ಲಿ ನನ್ನ ಜತೆ ಪೊಲೀಸರು ಎರಡನೇ ಸಲ ಅನುಚಿತವಾಗಿ ವರ್ತಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲು ಎರಡು ಬಾರಿ ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಪದೇಪದೆ ಇಂಥ ಘಟನೆ ನಡೆದಿದ್ದು, ಶಾಸಕರಿಗೆ ರಕ್ಷಣೆ ಕೊಡುವರ‍್ಯಾರು ಎಂದು ಸಭಾಪತಿಗಳ ಗಮನಕ್ಕೆ ತಂದರು. ಶರ್ಟ್ ಹಿಡಿದು ನೂಕಿರುವ ಘಟನೆ ವಿಡಿಯೋ, ಚಿತ್ರಗಳಿವೆ. ಗೃಹ ಸಚಿವರ ಗಮನಕ್ಕೆ ತಂದಿz್ದÉÃನೆ. ಶಾಸಕರಿಗೆ ರಕ್ಷಣೆ ಎಲ್ಲಿದೆ? ಸಭಾಪತಿಗಳೇ ಉತ್ತರಿಸಬೇಕು ಎಂದರು.

ಮತ್ತಿಮಡು ವಾದಕ್ಕೆ ಬೆಂಬಲಿಸಿದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಆಡಳಿತ ಪಕ್ಷದವರನ್ನು ಬಗ್ಗು ಬಡಿಯುವ ಜತೆಗೆ ವಿಪಕ್ಷದವರ ಮೇಲೆ ಹಲ್ಲೆ ಮಾಡಿದ್ದಾರೆ. ಹೇಳೋರು ಕೇಳೋರು ಯಾರೂ ಇಲ್ವಾ ಎಂದು ಪ್ರಶ್ನಿಸಿದರು. ಚುನಾಯಿತ ಪ್ರತಿನಿಧಿಗಳಿಗೆ ಅಧಿಕಾರಿಗಳು ಬೆಲೆ ಕೊಡಲ್ಲ ಎಂದರೆ ಹೇಗೆ? ಹಕ್ಕು ಬಾಧ್ಯತಾ ಸಮಿತಿಗೆ ಗೌರವ ನೀಡಲ್ಲ ಎಂದರೆ ಅಧಿಕಾರಿಗಳು ಏನು ಮಾಡ್ತಾ ಇದ್ದಾರೆ? ಮಹೇಶ ಮೇಘಣ್ಣನವರ ವಿರುದ್ಧ ಕ್ರಮ ಜರುಗಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಭಾಪತಿ ಯು.ಟಿ. ಖಾದರ್, ಶಾಸಕರಿಗೆ ಗೌರವ ನೀಡುವುದು ಅತಿ ಮುಖ್ಯ. ಅಧಿಕಾರಿಗಳು ಜನಪ್ರತಿನಿಧಿಗಳಿಗೆ ಗೌರವ ಕೊಡಲೇಬೇಕು. ಶಾಸಕರಿಗೆ ಅವಮಾನ ಇಡೀ ಸದನಕ್ಕೆ ಅವಮಾನ. ಇದನ್ನು ಸರ್ಕಾರ ಗಂಭೀರ ಪರಿಗಣಿಸಬೇಕು ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net