ಪೊಲೀಸರು ತೋರುತ್ತಿದ್ದಾರೆ ದಿವ್ಯ ನಿರ್ಲಕ್ಷ್ಯ

7sirsi1
Published on

ಶಿರಸಿ: ಕೋವಿಡ್- 19 ವೈರಸ್ ಹರಡುವಿಕೆ ತಡೆಗಟ್ಟುವ ಹಿನ್ನೆಲೆಯಲ್ಲಿ ಜಾರಿಗೊಂಡ ಲಾಕ್ ಡೌನ್ ಆದೇಶಕ್ಕೆ ಶಿರಸಿಯಲ್ಲಿ ಬೆಲೆ ಇಲ್ಲದಂತಾಗಿದೆ. ಸಾರ್ವಜನಿಕರು ಬೇಕಾಬಿಟ್ಟಿ ರಸ್ತೆಗಿಳಿದರೆ ಪೊಲೀಸರು ಕಾಟಾಚಾರಕ್ಕೆಂಬಂತೆ ಕರ್ತವ್ಯದಲ್ಲಿ ತೊಡಗಿದ್ದಾರೆ.

ಮಾರಕ ಕರೊನಾ ನಿಯಂತ್ರಿಸಲು ದೇಶವೇ ಲಾಕ್ ಡೌನ್ ಪಾಲಿಸುತ್ತಿದ್ದರೂ ನಗರದಲ್ಲಿ ಮಾತ್ರ ಇದರ ಪರಿವೆಯಿಲ್ಲದವರ ರೀತಿಯಲ್ಲಿ ಜನರು ಹಾಗೂ ಪೊಲೀಸರು ವರ್ತಿಸುತ್ತಿದ್ದಾರೆ. ಔಷಧ ತರುವಂತಹ ತುರ್ತು ಸಂದರ್ಭಗಳಲ್ಲಿ ಮಾತ್ರ ಸಾರ್ವಜನಿಕರು ರಸ್ತೆಗಿಳಿಯಬಹುದು ಎಂಬ ಆದೇಶವಿದ್ದರೂ ಅನಗತ್ಯವಾಗಿ ಜನರು ಓಡಾಡುತ್ತಿದ್ದಾರೆ. ನೂರಾರು ವಾಹನಗಳು ಯಾವುದೇ ಎಗ್ಗಿಲ್ಲದೆ ಸಂಚರಿಸುತ್ತಿವೆ. ನಗರ ವ್ಯಾಪ್ತಿಯಲ್ಲಿ ಪಾದಚಾರಿಗಳ ಸಂಖ್ಯೆಯೂ ಹೆಚ್ಚುತ್ತಿದ್ದು, ವಾಯುವಿಹಾರಕ್ಕಾಗಿ ಹೋಗುವವರ ಸಂಖ್ಯೆ ಏರಿಕೆಯಾಗಿದೆ. ಲಾಕ್ ಡೌನ್ ಆದೇಶ ವಾಪಸ್ ಪಡೆಯಲಾಗಿದೆಯೇನೋ ಎಂಬಂತೆ ಜನರು ಬೀದಿಗೆ ಬರುತ್ತಿದ್ದರೂ ಪೊಲೀಸರು ಮಾತ್ರ ಕಾಟಾಚಾರಕ್ಕೆ ಕರ್ತವ್ಯದಲ್ಲಿದ್ದಂತೆ ವರ್ತಿಸುತ್ತಿದ್ದಾರೆ.

ಬೆಳಗ್ಗೆಯಿಂದ ಸಂಜೆವರೆಗೆ ನಗರ ವ್ಯಾಪ್ತಿಯಲ್ಲಿ ಸಾವಿರಕ್ಕೂ ಹೆಚ್ಚು ಸಾರ್ವಜನಿಕರು ಅನಗತ್ಯವಾಗಿ ರಸ್ತೆಗಿಳಿಯುತ್ತಿದ್ದಾರೆ. ನಗರದಲ್ಲಿ ಸುಖಾಸುಮ್ಮನೆ ಓಡಾಟ ನಡೆಸುವ ಇವರನ್ನು ಪೊಲೀಸರು ಕಾಟಾಚಾರಕ್ಕೆ ಪ್ರಶ್ನಿಸಿ ಕಳುಹಿಸುತ್ತಿದ್ದಾರೆ. ಪ್ರಮುಖ ಸರ್ಕಲ್​ಗಳಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಪ್ರಯೋಜನಕ್ಕೆ ಬಾರದಂತಾಗಿದೆ. ಹೆಚ್ಚಿನ ಕಡೆ ಸಾರ್ವಜನಿಕರು ಯಾವುದೇ ಅಡ್ಡಿ ಆತಂಕವಿಲ್ಲದೆ ಸಂಚರಿಸುತ್ತಿದ್ದಾರೆ. ಜತೆಗೆ ನಗರದ ಮರಾಠಿಕೊಪ್ಪದ ಕೆಲ ಪುಂಡ ಯುವಕರು ಪೊಲೀಸರು ಕರ್ತವ್ಯಕ್ಕೆ ಹಾಜರಾಗುವ ಮುನ್ನವೇ ಮದ್ಯದ ಜತೆ ಗ್ರಾಮೀಣ ಭಾಗದ ಹೊಳೆಗಳಿಗೆ ದಂಡಾಗಿ ಹೋಗುತ್ತಿದ್ದು, ಮೋಜು ಮಸ್ತಿಗೆ ಲಾಕ್​ಡೌನ್ ಅವಧಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

ಭಟ್ಕಳದಿಂದ ಬರುತ್ತಿದ್ದಾರೆ ಜನ
ಜನಸಂಚಾರ ನಿಯಂತ್ರಿಸಲು ಹೊರ ಜಿಲ್ಲೆ ಹಾಗೂ ಹೊರ ತಾಲೂಕುಗಳಿಂದ ತಾಲೂಕಿಗೆ ಪ್ರವೇಶಿಸುವಲ್ಲಿ ಪೊಲೀಸ್ ಚೆಕ್​ಪೋಸ್ಟ್ ನಿರ್ವಿುಸಲಾಗಿದೆ. ಆದರೆ, ಈ ಚೆಕ್​ಪೋಸ್ಟ್ ಗಳ ಕಣ್ತಪ್ಪಿಸಿ ಜಿಲ್ಲೆಯ ಭಟ್ಕಳ ತಾಲೂಕಿನಿಂದ ಶಿರಸಿಯ ರೇವಣಕಟ್ಟಾ ಹಾಗೂ ನಗರದ ಕಸ್ತೂರಬಾನಗರ, ಮುಸ್ಲಿಂ ಗಲ್ಲಿಗಳಿಗೆ ರಾತ್ರಿ ವೇಳೆ ಜನರು ತುಂಬಿದ ವಾಹನಗಳು ನಿರಂತರವಾಗಿ ಬರುತ್ತಿವೆ ಎಂದು ಸ್ಥಳಿಕರು ಆರೋಪಿಸುತ್ತಿದ್ದಾರೆ. ರಾತ್ರಿ ವೇಳೆ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಇನ್ನಷ್ಟು ಚುರುಕಿನಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ.

ಸಾರ್ವಜನಿಕರಿಂದ ಲಾಕ್​ಡೌನ್ ಆದೇಶ ಉಲ್ಲಂಘನೆ ಸರಿಯಲ್ಲ. ಅನಗತ್ಯವಾಗಿ ರಸ್ತೆಗಿಳಿಯುವ ಜನರ ಮೇಲೆ ಇನ್ನಷ್ಟು ಕಠಿಣ ಕ್ರಮವಹಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚನೆ ನೀಡಲಾಗುವುದು.| ಶಿವಪ್ರಕಾಶ ದೇವರಾಜಉತ್ತರ ಕನ್ನಡ ಎಸ್​ಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net