ಪೊಲೀಸರ ಫೇಸ್​ಬುಕ್ ಖಾತೆಗೇ ಕನ್ನ

Facebook Logo
Published on

ಕಾರವಾರ: ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿ ಹಣ ಕೇಳಿ ವಂಚಿಸುವ ಜಾಲ ವ್ಯಾಪಕವಾಗುತ್ತಿದೆ. ಒಂದೇ ವಾರದಲ್ಲಿ ಜಿಲ್ಲೆಯಲ್ಲಿ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ವಿಶೇಷ ಎಂದರೆ ಹ್ಯಾಕರ್​ಗಳು ಪೊಲೀಸರನ್ನೇ ಗುರಿಯಾಗಿಟ್ಟುಕೊಂಡು ಮೋಸದ ಜಾಲ ಬೀಸುತ್ತಿದ್ದಾರೆ.

ಕಾರವಾರ ಗ್ರಾಮೀಣ ಠಾಣೆ ಪಿಎಸ್​ಐ ರೇವಣ್ಣ ಅವರ ಫೇಸ್​ಬುಕ್ ಖಾತೆ ಹ್ಯಾಕ್ ಮಾಡಿ, ಅವರ ಮೇಸೆಂಜರ್ ಮೂಲಕ ಅವರ ಗೆಳೆಯರಿಗೆ ಮೆಸೇಜ್ ಮಾಡಿ 10 ಸಾವಿರ ರೂ. ಬೇಡಿಕೆ ಇಟ್ಟ ಬಗ್ಗೆ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದಾಗಿ ಎರಡು ದಿನದ ಒಳಗೆ ಮತ್ತೆರಡು ಪ್ರಕರಣಗಳು ಬೆಳಕಿಗೆ ಬಂದಿವೆ. ಮಲ್ಲಾಪುರ ಠಾಣೆಯಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಭೀಮಸಿಂಗ್ ಲಮಾಣಿ ಅವರ ಖಾತೆ ಹ್ಯಾಕ್ ಆಗಿದೆ.

ಮಲ್ಲಾಪುರದ ಬಿಜೆಪಿ ಮುಖಂಡ ಘನಶ್ಯಾಮ ಬಾಂದೇಕರ್ ಅವರಿಗೆ ಭೀಮಸಿಂಗ್ ಲಮಾಣಿ ಅವರ ಫೇಸ್​ಬುಕ್ ಖಾತೆಯಿಂದ ಮೆಸೇಜ್ ಬಂದಿತ್ತು. ನನಗೆ ತುರ್ತಾಗಿ 10 ಸಾವಿರ ರೂ. ಸಹಾಯ ಬೇಕಿದೆ. ಗೂಗಲ್ ಪೇ ಮಾಡಿ ಎಂದು ಕೇಳಲಾಗಿತ್ತು. ಅನುಮಾನಗೊಂಡ ಘನಶ್ಯಾಮ ಭೀಮಸಿಂಗ್ ಅವರಿಗೆ ಕರೆ ಮಾಡಿ ಕೇಳಿದಾಗ ಅವರು ಯಾವುದೇ ಹಣದ ಬೇಡಿಕೆ ಇಟ್ಟಿಲ್ಲ ಎಂಬುದು ಖಚಿತವಾಗಿದೆ.

ಕುಮಟಾದಲ್ಲೂ ಮತ್ತೊಂದು ಪ್ರಕರಣ: ಕುಮಟಾ ಬರ್ಗಿಯ ರಾಮ ಕೃಷ್ಣ ಪಟಗಾರ ಅವರ ಫೇಸ್ ಬುಕ್ ಖಾತೆಯ ಫೋಟೋಗಳನ್ನು ಕಾಪಿ ಮಾಡಿ ನಕಲಿ ಖಾತೆ ಸೃಷ್ಟಿಸಿ, ಕೆಲವು ಸ್ನೇಹದ ಸಂದೇಶಗಳನ್ನು ಕಳಿಸಿ ಅವರು ಅಕ್ಸೆಪ್ಟ್ ಮಾಡಿದಾಗ ಕೆಲವರಿಗೆ ಸಂದೇಶ ಕಳಿಸಿ ನನಗೆ ಸಂಕಷ್ಟವಿದೆ 10 ಸಾವಿರ ರೂ. ನೀಡುವಂತೆ ಬೇಡಿಕೆ ಇಡಲಾಗಿದೆ. ಅದರಂತೆ ಅವರ ಸ್ನೇಹಿತರೊಬ್ಬರು ವಂಚಕ ನೀಡಿದ ಬ್ಯಾಂಕ್ ಖಾತೆಗೆ 11,500 ರೂ. ಹಾಕಿ ಮೋಸ ಹೋಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೇಗೆ ನಡೆಯುತ್ತೆ ವಂಚನೆ?: ಫೇಸ್​ಬುಕ್ ಖಾತೆಯನ್ನು ಹ್ಯಾಕ್ ಮಾಡುತ್ತಾರೆ. ಅಥವಾ ಇದ್ದವರ ಫೇಸ್​ಬುಕ್ ಖಾತೆಗಳಲ್ಲಿನ ಫೋಟೋಗಳನ್ನು ಕದ್ದು ಹೊಸ ಖಾತೆ ಸೃಷ್ಟಿಸುತ್ತಾರೆ. ಅವರ ಹೆಸರಿನಲ್ಲಿ ಮೆಸೆಂಜರ್ ಮೂಲಕ ಹಣದ ಬೇಡಿಕೆ ಇಡಲಾಗುತ್ತದೆ. ಹೆಚ್ಚಾಗಿ ಈ ಹಿಂದೆ ಒಂದು ಖಾತೆಯಲ್ಲಿ ಮೆಸೆಂಜರ್ ಮೂಲಕ ಹೆಚ್ಚು ಚಾಟ್ ಮಾಡಿದವರನ್ನು ಗುರುತಿಸಿ ಅವರ ಬಳಿ ಹಣದ ಬೇಡಿಕೆ ಇಡಲಾಗುತ್ತದೆ. ಅದಕ್ಕೆ ಸ್ಪಂದಿಸಿದರು ಎಂದಲ್ಲಿ ತಮ್ಮ ಬ್ಯಾಂಕ್ ಖಾತೆ ಸಂಖ್ಯೆ, ಅಥವಾ ಗೂಗಲ್ ಪೇ ಬಳಸಿ ಹಣ ಪಡೆಯಲಾಗುತ್ತದೆ. ಇದರಿಂದ ಯಾರೇ ಆದರೂ ಇಂಥ ಸಂದೇಶ ಬಂದಲ್ಲಿ ತಮ್ಮ ಸ್ನೇಹಿತರ ಜತೆ ಮಾತನಾಡಿ ಖಚಿತ ಮಾಡಿಕೊಂಡಂತೂ ಖಾತೆಗೆ ಹಣ ವರ್ಗಾವಣೆ ಮಾಡದೇ ಇರುವುದು ಒಳಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net