ಪೊಲೀಸರ ಪೂರ್ವಾನುಮತಿ ಪಡೆದುಕೊಳ್ಳಿ

19 mlv 2
Published on

ಮಳವಳ್ಳಿ: ಪಟ್ಟಣದ ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಮಂಗಳವಾರ ಪೊಲೀಸ್ ಉಪ ವಿಭಾಗದ ವತಿಯಿಂದ ಗೌರಿ-ಗಣೇಶ ಹಬ್ಬ ಆಚರಣೆ ಸಂಬಂಧ ಸಾರ್ವಜನಿಕರ ಸಭೆ ಆಯೋಜಿಸಲಾಗಿತ್ತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್‌ಪಿ ಕೃಷ್ಣಪ್ಪ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲು ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪೂರ್ವಾನುಮತಿ ಪಡೆದುಕೊಳ್ಳಬೇಕೆಂದ ಅವರು, ಆ.27ರಂದು ಗಣೇಶ ಚತುರ್ಥಿ ಅಂಗವಾಗಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರು ಸಂಬಂಧಿಸಿದ ಇಲಾಖೆಗಳಿಂದ ನಿರಾಪೇಕ್ಷಣಾ ಪತ್ರ ಪಡೆಯುವ ಜತೆಗೆ ಎಲ್ಲ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚನೆ ನೀಡಿದರು.

ಗಣೇಶಮೂರ್ತಿ ಕೂರಿಸಲಿಚ್ಛಿಸುವ ಯುವಕರು ಹಾಗೂ ಸಂಘ-ಸಂಸ್ಥೆಗಳವರು ಸೆಸ್ಕ್, ಪುರಸಭೆ ಅಥವಾ ಆಯಾ ಗ್ರಾಮ ಪಂಚಾಯಿತಿಯಿಂದ ನಿರಾಪೇಕ್ಷಣಾ ಪತ್ರವನ್ನು ಕಡ್ಡಾಯವಾಗಿ ಪಡೆದಿದ್ದಲ್ಲಿ ಮಾತ್ರ ಪೊಲೀಸ್ ಠಾಣೆಯಿಂದ ಅನುಮತಿ ನೀಡಲಾಗುವುದು ಎಂದರು.

ಅಲ್ಲದೇ ಪ್ರತಿಷ್ಠಾಪನಾ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು, ದಿನದ 24 ಗಂಟೆಯೂ ಸಂಬಂಧಿಸಿದವರು ಸ್ಥಳದಲ್ಲಿ ಕಾವಲಿರಬೇಕು. ಬೆಂಕಿ ಅವಘಡ ಸೇರಿದಂತೆ ಯಾವುದೇ ಅನಾಹುತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಸೇರಿದಂತೆ ರಾತ್ರಿ 10 ಗಂಟೆ ನಂತರ ಧ್ವನಿವರ್ಧಕ ಹಾಕಬಾರದು ಎಂದು ತಿಳಿಸಿದರು.

ಪ್ರತಿಷ್ಠಾಪಿಸಿದ ಮೂರ್ತಿಗಳನ್ನು ಸೆ.9ರ ಒಳಗೆ ವಿಸರ್ಜನೆ ಮಾಡಬೇಕು, ಮೆರವಣಿಗೆ ಸಂದರ್ಭದಲ್ಲಿ ಯಾವುದೇ ಡಿಜೆ, ಧ್ವನಿವರ್ಧಕ ಅಳವಡಿಸುವಂತಿಲ್ಲ. ಇದರಿಂದ ಹಿರಿಯ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಹಾಗೂ ಕೋಮು ಗಲಭೆ ಉಂಟಾಗುವ ಸಾಧ್ಯತೆ ಇರುವುದರಿಂದ ಕಡ್ಡಾಯವಾಗಿ ಡಿಜೆ ಸೌಂಡ್ಸ್ ನಿರ್ಬಂಧ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸಲು ಮತ್ತು ಕಾನೂನು ಸುವ್ಯವಸ್ತೆ ದೃಷ್ಟಿಯಿಂದ ಪೊಲೀಸರಿಗೆ ಸಹಕರಿಸಬೇಕು. ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾನೂನು ಕ್ರಮ ಅನಿವಾರ್ಯ ಎಂದು ಎಚ್ಚರಿಸಿದರು.

ಸಭೆಯಲ್ಲಿ ಸಿಪಿಐಗಳಾದ ಶ್ರೀಧರ್, ಮಹೇಶ್, ಪಟ್ಟಣ ಇನ್ಸ್‌ಪೆಕ್ಟರ್ ರವಿಕುಮಾರ್, ವಿವಿಧ ಠಾಣೆಗಳ ಪಿಎಸ್‌ಐಗಳಾದ ಪ್ರಕಾಶ್, ಲೋಕೇಶ್, ಶಿವಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net