ಪೊನ್ನಂಪೇಟೆಯಲ್ಲಿ ಹೆಣ್ಣು ಮಕ್ಕಳ ಕ್ರೀಡಾ ವಸತಿ ಶಾಲೆ

29 gkp 02
Published on

ಗೋಣಿಕೊಪ್ಪ: ಭಾರತದ ಹಾಕಿ ತಂಡವನ್ನು ಈ ಹಿಂದೆ ಕೊಡಗು ಜಿಲ್ಲೆಯಿಂದ ಹಲವು ಕ್ರೀಡಾಪಟುಗಳು ಪ್ರತಿನಿಧಿಸಿದ್ದಾರೆ. ಆದರೆ, ಪ್ರಸ್ತುತ ಭಾರತ ಹಾಕಿ ತಂಡದಲ್ಲಿ ಜಿಲ್ಲೆಯ ಒಬ್ಬ ಕ್ರೀಡಾಪಟು ಕೂಡ ಇಲ್ಲದಿರುವುದು ಬೇಸರ ತರಿಸಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಬೇಸರ ವ್ಯಕ್ತಪಡಿಸಿದರು.

ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಹಾಕಿ ಟರ್ಫ್ ಮೈದಾನದಲ್ಲಿ ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಕೊಡಗು ಉಪನಿರ್ದೇಶಕರ ಕಚೇರಿ, ವೀರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ವೀರಾಜಪೇಟೆ ಪ್ರಗತಿ ಶಾಲೆ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಬಾಲಕ ಮತ್ತು ಬಾಲಕಿಯರ ಹಾಕಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕ್ರೀಡೆಗೆ ಅದರಲ್ಲೂ ಹಾಕಿಗೆ ಅಪಾರವಾದ ಕೊಡುಗೆಯನ್ನು ಕೊಡಗು ಜಿಲ್ಲೆ ನೀಡಿದೆ. ಇಲ್ಲಿನ ಜನ ಯಾವುದೇ ಕ್ರೀಡೆ ನಡೆದರೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಾರೆ. ಆ ನಿಟ್ಟಿನಲ್ಲಿ ಪೊನ್ನಂಪೇಟೆಯಲ್ಲಿ ರಾಜ ್ಯಮಟ್ಟದ ಹಾಕಿ ಪಂದ್ಯಾವಳಿ ಆಯೋಜಿಸಲು ಆಸಕ್ತಿ ವಹಿಸಲಾಯಿತು. ಭಾರತ ಹಾಕಿ ತಂಡದಲ್ಲಿ ಕರ್ನಾಟಕ ಅದರಲ್ಲೂ ಕೊಡಗು ಜಿಲ್ಲೆಯ ಹಾಕಿ ಪಟುಗಳ ಕೊರತೆ ನೀಗಿಸಿ ಯುವಕರಲ್ಲಿ, ಮಕ್ಕಳಲ್ಲಿ ಹಾಕಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈಗಾಗಲೇ ಪೊನ್ನಂಪೇಟೆಯಲ್ಲಿ ಹೆಣ್ಣು ಮಕ್ಕಳ ಕ್ರೀಡಾ ವಸತಿ ಶಾಲೆಯನ್ನು ನಿರ್ಮಾಣ ಮಾಡಲು 5 ಕೋಟಿ ರೂ.ಅನುದಾನ ಘೋಷಣೆ ಮಾಡಿದೆ ಎಂದು ಹೇಳಿದರು.

ಶಾಲೆಯ ಆಡಳಿತ ಮಂಡಳಿ ಮತ್ತು ಫ್ರೀ ಡೈಲಾಗ್‌ನೊಂದಿಗೆ ಚರ್ಚಿಸಿ ಪೊನ್ನಂಪೇಟೆಯಲ್ಲಿ ಈಗಾಗಲೇ ಇರುವ ಕ್ರೀಡಾ ವಸತಿ ನಿಲಯದ ಪಕ್ಕದಲ್ಲಿಯೇ ಸ್ಥಳ ಗುರುತಿಸಿ, ನಕ್ಷೆ ತಯಾರಿಸಲಾಗುತ್ತಿದೆ. ಶೀಘ್ರದಲ್ಲೇ ನೂತನ ಕ್ರೀಡಾ ವಸತಿನಿಲಯ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅದೇ ಅನುದಾನದಲ್ಲಿ ಶೌಚಗೃಹ, ಕ್ರೀಡಾಪಟುಗಳ ಬಟ್ಟೆ ಬದಲಾಯಿಸುವ ಕೊಠಡಿ ನಿರ್ಮಾಣ ಮಾಡಲಾಗುವುದು ಎಂದರು.

ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಮೂಲಸೌಲಭ್ಯಗಳನ್ನು ಕೊಡಲು ವಿಫಲವಾಗಿರುವ ಕಾರಣ ರಾಷ್ಟ್ರ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ಅಥವಾ ಕೊಡಗಿನಿಂದ ಕ್ರೀಡಾಪಟುಗಳ ಕೊರತೆ ಕಾಡುತ್ತಿದೆ. ಈ ಬಗ್ಗೆ ಗಮನಹರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕ್ರೀಡೆಗೆ ಕೊಡಗು ಜಿಲ್ಲೆಯಲ್ಲಿ ನೀಡುವಷ್ಟು ಪ್ರೋತ್ಸಾಹವನ್ನು ನಾವು ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ನಮ್ಮ ರಾಷ್ಟ್ರೀಯ ಕ್ರೀಡೆಯಾಗಿರುವ ಹಾಕಿಗೆ ಇನ್ನು ಹೆಚ್ಚಿನ ಪ್ರೋತ್ಸಾಹ ಅಗತ್ಯವಿದೆ. ಸಂಸದರ ನಿಧಿಯಿಂದ ಕ್ರೀಡೆಗೆ ದೊರೆಯುವ ಎಲ್ಲ ಸಹಕಾರವನ್ನು ನೀಡಲಾಗುವುದು. ಕ್ರೀಡೆಯ ಮೂಲಕ ಭಾರತದ ಏಕತೆಯನ್ನು ಎತ್ತಿ ಹಿಡಿಯೋಣ ಎಂದರು.

ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣೀರ ಹರೀಶ್, ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲಚಂಡ ಪ್ರಮೋದ್ ಗಣಪತಿ, ಪೊನ್ನಂಪೇಟೆ ಸಪಪೂ ಕಾಲೇಜು ಸಿಬಿಸಿ ಉಪಾಧ್ಯಕ್ಷ ಮೂಕಳೇರ ಕುಶಾಲಪ್ಪ, ಅಂತಾರಾಷ್ಟ್ರೀಯ ರಗ್ಬಿ ಆಟಗಾರ, ವೀರಾಜಪೇಟೆ ಪ್ರಗತಿ ಶಾಲೆ ವ್ಯವಸ್ಥಾಪಕ ಮಾದಂಡ ತಿಮ್ಮಯ್ಯ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net