

ಹಳಿಯಾಳ: ತಾಲೂಕಿನಲ್ಲಿ ಕಾಳಿನದಿ ಏತ ನೀರಾವರಿ ಯೋಜನೆಯ ಪೈಪ್ ಅಳವಡಿಸುವ ಕಾರ್ಯ ಆರಂಭಗೊಂಡಿದೆ. ಈ ಕೆಲಸ ಸದ್ಯ ರಾಜ್ಯ ಹೆದ್ದಾರಿಯ ಪಕ್ಕದಲ್ಲಿಯೇ ನಡೆಯುತ್ತಿದೆ. ಪೈಪ್ ಅಳವಡಿಸಲು ಭೂಮಿ ಅಗೆದಿರುವುದರಿಂದ ರಸ್ತೆ ಪಕ್ಕದಲ್ಲಿನ ಚರಂಡಿಗಳು ಮುಚ್ಚಿ ಹೋಗಿದೆ. ಪರಿಣಾಮ ಮಳೆ ನೀರು ರಸ್ತೆ ಮೇಲೆ ಹರಿದು ರಸ್ತೆ ಪೂರ್ಣ ಹಾಳಾಗಿದೆ.
ಕಳೆದ ಕೆಲ ದಿನಗಳಿಂದ ಆರಂಭಗೊಂಡಿರುವ ಅವ್ಯಾಹತ ಮಳೆಯಿಂದಾಗಿ ಮುರ್ಕವಾಡ ಜಿ.ಪಂ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹಳಿಯಾಳ ಕಲಘಟಗಿ ರಾಜ್ಯ ಹೆದ್ದಾರಿಯ ಡಾಂಬರು ಕಿತ್ತೆದ್ದು ಹೋಗಿದೆ. ಕಾಳಿನದಿ ನೀರಾವರಿ ಫೈಪ್ ಅಳವಡಿಕೆ ಕಾಮಗಾರಿಯಲ್ಲಿನ ನಿರ್ಲಕ್ಷ್ಯತನವೇ ಇದಕ್ಕೆ ಕಾರಣವೆಂದು ಈ ಭಾಗದ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಅಲ್ಲದೆ, ಬಾಣಸಗೇರಿಯಿಂದ ಮುರ್ಕವಾಡವರೆಗಿನ ರಸ್ತೆಯು ಅಲ್ಲಲ್ಲಿ ಕಿತ್ತು ಹೋಗಿದೆ. ರಸ್ತೆಯುದ್ದಕ್ಕೂ ಗುಂಡಿಗಳು ಬಿದ್ದಿದ್ದು, ವಾಹನ ಸವಾರರು ಈ ಗುಂಡಿಗಳನ್ನು ತಪ್ಪಿಸಲು ಕಸರತ್ತು ಮಾಡಬೇಕಾಗಿದೆ. ವಾಹನ ಸಂಚಾರಕ್ಕಾಗಿಯಾದರೂ ತಾತ್ಕಾಲಿಕ ದುರಸ್ತಿ ಕಾರ್ಯವನ್ನು ಮಾಡಿ ಎಂದು ಲೋಕೋಪಯೋಗಿ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಪೈಪ್ ಅಳವಡಿಸಿದ ನಂತರ ಸರಿಯಾಗಿ ಮಣ್ಣನ್ನು ತುಂಬದೇ ಇರುವುದರಿಂದ, ರಸ್ತೆ ಪಕ್ಕದಲ್ಲಿ ನೀರು ಹರಿಯಲು ಮಾಡಿರುವ ಚರಂಡಿಗಳಲ್ಲಿ ಮಣ್ಣು ತುಂಬಿದ ಪರಿಣಾಮ, ಮಳೆ ನೀರು ರಸ್ತೆ ಮೇಲೆ ಹರಿದಿದೆ. ಇದರಿಂದ ಡಾಂಬರು ಕಿತ್ತಿದೆ. ಇಕ್ಕೆಲ ಹಾಳಾಗಿದೆ. ಈ ಕುರಿತು ಕಾಳಿ ನೀರಾವರಿ ಯೋಜನೆಯ ಉಸ್ತುವಾರಿ ವಹಿಸಿರುವ ಕೆಎನ್ಎನ್ಎಲ್(ಕರ್ನಾಟಕ ನೀರಾವರಿ ನಿಗಮ ನಿಯಮಿತ) ನಿಗಮಕ್ಕೆ ತಿಳಿಸಲಾಗಿದೆ. ನಿಗಮದ ಮೇಲಧಿಕಾರಿಗಳು ಚರಂಡಿಯಲ್ಲಿ ತುಂಬಿರುವ ಮಣ್ಣನ್ನು ತೆಗೆದು ಮಳೆ ನೀರು ಹರಿಯಲು ಅವಕಾಶ ಮಾಡಿ ಕೊಡುವುದಾಗಿ ಭರವಸೆ ನೀಡಿದ್ದಾರೆ. | ಸುದರ್ಶನ ಹೊನ್ನಾವರ ಎಇಇ ಲೋಕೋಪಯೋಗಿ ಇಲಾಖೆ ಹಳಿಯಾಳ