

ಸೋಮವಾರಪೇಟೆ: ಮಾತೃಭಾಷೆ ಕನ್ನಡದೊಂದಿಗೆ ಇಂಗ್ಲಿಷ್ ಭಾಷೆಯನ್ನು ಪೂರ್ವ ಪ್ರಾಥಮಿಕ ಹಂತದಲ್ಲೇ ಕಲಿಸಲು ಸರ್ಕಾರ ಯೋಜನೆ ರೂಪಿಸಿರುವುದು ಅತ್ಯಂತ ಸಮಂಜಸ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟರು.
ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆ ವತಿಯಿಂದ ಚೌಡ್ಲು ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಹತ್ತನೆ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಶೇ.100ರಷ್ಟು ಫಲಿತಾಂಶ ಗಳಿಸಿದ ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಎಲ್‌ಕೆಜಿ ಮತ್ತು ಯುಕೆಜಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪ್ರವೇಶ ಪಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ. ಕೆಲವು ಶಾಲೆಗಳಲ್ಲಿ ಅತೀ ಹೆಚ್ಚಿನ ಮಕ್ಕಳು ಅರ್ಜಿ ಸಲ್ಲಿಸಿದ್ದಾರೆ. 30 ಮಕ್ಕಳನ್ನು ಮಾತ್ರ ಪ್ರವೇಶಾತಿಗೆ ಅವಕಾಶವಿದ್ದು, ಅರ್ಜಿ ಸಲ್ಲಿಸಿದ ಎಲ್ಲ ಮಕ್ಕಳಿಗೂ ಪ್ರವೇಶಾತಿಗೆ ಅನುಕೂಲ ಮಾಡಿಕೊಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಳೆದ 25 ವರ್ಷಗಳ ಹಿಂದೆಯೇ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ಅಳವಡಿಸಿದ್ದರೆ, ಸರ್ಕಾರಿ ಶಾಲೆಗಳಿಗೆ ಸಮಸ್ಯೆ ಇರಲಿಲ್ಲ. ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ತರಬೇಕಿದ್ದು ಈ ಬಗ್ಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಇಂಗ್ಲೀಷ್ ಕಲಿಸಿದರೆ, ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳು ಸ್ಪರ್ಧೆಗೆ ಸಿದ್ದರಾಗುತ್ತಾರೆ. ವಿದ್ಯಾರ್ಥಿಗಳು ನಿರಂತರ ಕಲಿಕೆಯೊಂದಿಗೆ ಹೆಚ್ಚು ಅಂಕಗಳನ್ನು ಗಳಿಸಬೇಕು ಎಂದು ಹೇಳಿದರು.
ಕಳೆದ ಮೂರು ವರ್ಷಗಳಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಸೋಮವಾರಪೇಟೆ ತಾಲ್ಲೂಕು ಜಿಲ್ಲೆಯಲ್ಲಿ ಸತತವಾಗಿ ಪ್ರಥಮ ಸ್ಥಾನ ಪಡೆಯುತ್ತಿದೆ. ಈ ಸಾಧನೆಯಲ್ಲಿ ಶಿಕ್ಷಕರ ಪಾತ್ರ ದೊಡ್ಡದಿದೆ. 2025-26ನೇ ಸಾಲಿನಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನಗಳಿಸಬೇಕು. ಶಿಕ್ಷಣ ಇಲಾಖೆ ಇಂದಿನಿಂದಲೆ ಸಿದ್ಧತೆ ಮಾಡಿಕೊಳ್ಳಬೇಕು. ಎಲ್ಲ ರೀತಿಯ ಸಹಕಾರ ನೀಡುತ್ತೇನೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಮಾತನಾಡಿ, ಕುವೆಂಪು ಶಾಲೆಯ ವಿದ್ಯಾರ್ಥಿನಿ ಸಿ.ಎಸ್.ಆದ್ವಿ 625ಕ್ಕೆ 623 ಅಂಕಗಳನ್ನು ಪಡೆದು ಜಿಲ್ಲೆಗೆ ಟಾಫರ್ ಆಗಿ ಶಿಕ್ಷಣ ಇಲಾಖೆಗೆ ಮತ್ತು ಓದಿದ ಶಾಲೆಗೆ ಕೀರ್ತಿ ತಂದಿದ್ದಾರೆ. ತಾಲೂಕಿನ 70 ವಿದ್ಯಾರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. 10 ಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಈ ಸಾಧನೆಯಲ್ಲಿ ಶಿಕ್ಷಕರ ಪಾತ್ರ ಹಿರಿದಿದೆ ಎಂದು ಶ್ಲಾಘಿಸಿದರು.
ಪ್ರಸಕ್ತ ವರ್ಷದಿಂದ ತಾಲೂಕಿನ 8 ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮದ ಎಲ್‌ಕೆಜಿ, ಯುಕೆಜಿ ತರಗತಿಗಳು ಪ್ರಾರಂಭವಾಗಿವೆ. ಪಾಲಕರು ಹಾಗೂ ದಾನಿಗಳ ಸಹಕಾರದಿಂದ ಮೂರು ಶಾಲೆಗಳಲ್ಲಿ ಶಾಲಾ ವಾಹನಗಳನ್ನು ಖರೀದಿಸಲಾಗಿದೆ. ದಾಖಲಾತಿ ಹೆಚ್ಚಾಗಿದೆ. 30 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಹೆಚ್ಚುವರಿ ವಿಭಾಗ ತೆರಯಲು ಶಾಸಕರು ಅನುಮತಿ ಕೊಡಿಸಬೇಕು ಎಂದು ಮನವಿ ಮಾಡಿದರು.
ಅತಿ ಹೆಚ್ಚಿನ ಅಂಕ ಪಡೆದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಸಿ.ಎಸ್.ಆದ್ವಿ(623), ಕೆ.ಸಿ.ಪಂಚಮಿ(621), ಕೂಡ್ಲೂರು ಯೂನಿಕ್ ಅಕಾಡೆಮಿಯ ಸಮೃದ್ಧಿ ಅಚಾರ್(620), ಕುವೆಂಪು ಶಾಲೆಯ ಸಿ.ಎಸ್.ತೇಜಸ್ವಿನಿ, ನಿಡ್ತ ಸರ್ಕಾರಿ ಪ್ರೌಢಶಾಲೆಯ ಜೆ.ಎಸ್.ಪೂರ್ವಿಕಾ( 614), ಕುಶಾಲನಗರ ಜೂನಿಯರ್ ಕಾಲೇಜಿನ ಸರ್ನಿ ಗೌಡ(604), ಕೂಡಿಗೆ ಮುರಾರ್ಜಿ ಶಾಲೆಯ ಪಿ.ಪ್ರೀತಮ್(618), ಬಿ.ಎಸ್.ಆದಿತ್ಯ(614), ಶನಿವಾರಸಂತೆ ವಿಘ್ನೇಶ್ವರ ಶಾಲೆಯ ವಿ.ನಮಿತಾ(612), ಕೆ.ಜ್ಞಾನತೀರ್ಥ(595) ಅವರನ್ನು ಶಾಸಕರು ಸನ್ಮಾನಿಸಿದರು.
ಶೇ.100ರಷ್ಟು ಫಲಿತಾಂಶ ಪಡೆದ ಕೂಡಿಗೆ, ಕುಶಾಲನಗರ ಮತ್ತು ಬಸವನಹಳ್ಳಿ ಮುರಾರ್ಜಿ ಶಾಲೆ, ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ತೋಳೂರುಶೆಟ್ಟಳ್ಳಿ, ಶನಿವಾರಸಂತೆ ವಿಘ್ನೇಶ್ವರ ಬಾಲಿಕ ಪ್ರೌಢಶಾಲೆ, ಕೂಡ್ಲೂರು ಯೂನಿಕ್ ಅಕಾಡೆಮಿ, ವಿಘ್ನೇಶ್ವರ ಗೋಲ್ಡನ್ ಆಂಗ್ಲಮಾಧ್ಯಮ ಶಾಲೆ ಶನಿವಾರಸಂತೆ, ಬೊಳ್ಳೂರು ಉದ್ಗಂಶಾಲೆ, ಶನಿವಾರಸಂತೆ ಸುಪ್ರಜ ಗುರುಕುಲ, ಕಾನ್‌ಬೈಲ್ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ, ಕುವೆಂಪು ವಿದ್ಯಾಸಂಸ್ಥೆಯ ಕರೆಸ್ಪಾಡೆಂಟ್ ಕೆ.ಎಂ.ಜಗದೀಶ್, ನಿರ್ದೇಶಕರುಗಳಾದ ನಂದಕುಮಾರ್, ರಾಮಚಂದ್ರ, ಎಸ್.ಬಿ.ಭರತ್, ಕೆ.ಟಿ.ಪರಮೇಶ್, ಬಿ.ಪಿ.ಅನಿಲ್‌ಕುಮಾರ್, ಬಿಆರ್‌ಸಿ ಮಂಜೇಶ್, ಬಿಟಿಸಿಜಿ ಪ್ರಾಂಶುಪಾಲರಾದ ಮಿಲ್‌ಡ್ರೆಡ್ ಗೋನ್ಸಾಲ್ವೆಸ್, ಪ್ರೌಢಶಾಲಾ ಶಿಕ್ಷಕರ ಸಂಘದ ಹ್ಯಾರಿಮೋರಸ್ ಇದ್ದರು.