

ಕುಮಟಾ: ಇಲ್ಲಿನ ಬಿಇಒ ಕಚೇರಿ ಆವಾರದಲ್ಲಿರುವ ಪ್ರಾಥಮಿಕ ಹಾಗೂ ಪ್ರೌಢಶಾಲೆ ಪುಸ್ತಕ ಗೋದಾಮು ವಿಪರೀತ ಸೋರುತ್ತಿದೆ. ಇದರಿಂದಾಗಿ ಪುಸ್ತಕಗಳು ಒದ್ದೆಯಾಗದಂತೆ ತಡೆಯಲು ಸಾಧ್ಯವಾಗುತ್ತಿಲ್ಲ.
ಬಿಇಒ ಕಚೇರಿ ಆವಾರದಲ್ಲಿರುವ ಗೋದಾಮ ಕಟ್ಟಡ ಅಂದಾಜು ನಾಲ್ಕು ದಶಕಗಳಿಗೂ ಹಿಂದೆ ನಿರ್ವಿುಸಿರುವಂಥದ್ದು. ಸಿಮೆಂಟ್ ಶೀಟುಗಳ ಛಾವಣಿಯ ಈ ಗೋದಾಮಿನಲ್ಲೇ ಶಿಕ್ಷಣ ಇಲಾಖೆಗೆ ಬರುವ ಪಠ್ಯ ಹಾಗೂ ಇತರ ಸಾಮಗ್ರಿಗಳನ್ನು ದಾಸ್ತಾನು ಮಾಡಲಾಗುತ್ತದೆ. ಬಳಿಕ ಆಯಾ ಶಾಲೆಗಳಿಗೆ ಕಳುಹಿಸಲಾಗುತ್ತದೆ.
ಸದ್ಯ ಗೋದಾಮಿನ ಛಾವಣಿಯ ಶೀಟುಗಳು ಒಡೆದಿದ್ದು, ಕೆಲವೆಡೆ ದೊಡ್ಡ ದೊಡ್ಡ ತೂತುಗಳುಇ ಬಿದ್ದಿವೆ. ಕಿಟಕಿಗೆ ಮುಚ್ಚಿಗೆ ಇಲ್ಲ. ಗೋದಾಮಿನಲ್ಲಿ ಪಾರಿವಾಳಗಳು ಕಾಯಂ ನಿವಾಸಿಗಳಾಗಿದ್ದು, ಎಲ್ಲೆಡೆ ಹಿಕ್ಕೆಗಳ ರಾಶಿ ಅಸಹ್ಯ ಹುಟ್ಟಿಸುತ್ತದೆ. ಇಲಾಖೆಯಿಂದ ಈಗಾಗಲೇ ಸಹಸ್ರಾರು ಪುಸ್ತಕಗಳು ತಾಲೂಕಿಗೆ ಬಂದಿದ್ದು, ಪ್ರಾಥಮಿಕ ವಿಭಾಗದ ಬಹುತೇಕ ಪುಸ್ತಕಗಳನ್ನು ಶಾಲೆಗಳಿಗೆ ಕಳುಹಿಸಲಾಗಿದೆ. ಪ್ರೌಢಶಾಲೆ ಪುಸ್ತಕಗಳ ಒಂದಷ್ಟು ವಿಲೇವಾರಿ ಬಾಕಿ ಇದೆ. ಗೋದಾಮು ಚಿಕ್ಕದಾಗಿದ್ದರಿಂದ ಎಲ್ಲ ಪುಸ್ತಕಗಳನ್ನು ಸುರ್ಷಕಿತವಾಗಿ ಜೋಡಿಸಿಡುವುದು ಕಷ್ಟವಾಗಿದೆ.
ಕಳೆದ ಕೆಲ ದಿನಗಳಿಂದ ಉತ್ತಮವಾಗಿ ಮಳೆ ಸುರಿಯುತ್ತಿದೆ. ಗೋದಾಮಿನಲ್ಲಿ ಪುಸ್ತಕಗಳು ತುಂಬಿವೆ. ಮಳೆ ನೀರು ಸೋರುತ್ತಿರುವುದರಿಂದ ಪುಸ್ತಕಗಳನ್ನು ರಕ್ಷಿಸುವುದೇ ಇಲಾಖೆಯ ನೌಕರರಿಗೆ ಸವಾಲಾಗಿದೆ.
ಸೋರುವ ಕಡೆಗಳಲ್ಲಿ ಬಕೀಟ್, ಡಬ್ಬಗಳನ್ನಿಟ್ಟರೂ ಸಾಲುತ್ತಿಲ್ಲ. ಪುಸ್ತಕದ ರಾಶಿ ಮೇಲೆ ಪ್ಲಾಸ್ಟಿಕ್ ಹೊದೆಸಿದರೂ ಸಂಪೂರ್ಣವಾಗಿ ಪ್ರಯೋಜನವಾಗುತ್ತಿಲ್ಲ. ಮಳೆ ನೀರು ಎಲ್ಲೆಡೆಯಿಂದ ಒಳ ನುಗ್ಗುತ್ತಿದೆ. ಈಗಾಗಲೇ ಕೆಲ ಶಾಲೆಗೆ ಹಂಚಿಕೆಯಾದ ಒದ್ದೆ ಪುಸ್ತಕಗಳ ಬಗ್ಗೆ ಬೇಸರವೂ ವ್ಯಕ್ತವಾಗಿದೆ. ಈ ಬಗ್ಗೆ ಸ್ಪಷ್ಟನೆಗಾಗಿ ಬಿಇಒ ರಾಜೇಂದ್ರ ಎಲ್. ಭಟ್ಟ ಅವರನ್ನು ‘ವಿಜಯವಾಣಿ’ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.
ಇಷ್ಟೊಂದು ಸಮಸ್ಯೆ ಇದ್ದರೂ ಅಗತ್ಯದ ಸಮಯಕ್ಕೆ ಗೋದಾಮನ್ನು ಮೊದಲೇ ಸುಸ್ಥಿತಿಯಲ್ಲಿಟ್ಟುಕೊಳ್ಳುವ ಕಾರ್ಯವನ್ನು ಇಲಾಖೆ ಮಾಡಿಲ್ಲ. ಇದೇ ರೀತಿ ತಾಲೂಕಿನ ಶಾಲೆಗಳಿಗೆ ವಿತರಿಸುವ ಶಿಕ್ಷಣ, ಕ್ರೀಡೆ, ಆರೋಗ್ಯ ಇತರ ಪರಿಕರಗಳು ಬಂದಾಗಲೂ ಸಾಮಗ್ರಿಗಳನ್ನು ಸುಸ್ಥಿತಿಯಲ್ಲಿಡಲು ಕಷ್ಟವಾಗುತ್ತದೆ. ಆದ್ದರಿಂದ ಜಿಲ್ಲಾ ಪಂಚಾಯಿತಿ ಹಾಗೂ ಶಿಕ್ಷಣ ಇಲಾಖೆ ಕೂಡಲೇ ಮುತುವರ್ಜಿವಹಿಸಿ ಗೋದಾಮಿನ ದುರಸ್ತಿ ಅಥವಾ ಹೊಸ ಸುಸಜ್ಜಿತ ಗೋದಾಮಿನ ನಿರ್ವಣಕ್ಕೆ ಹೆಜ್ಜೆ ಇಡಬೇಕಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.
ಬಿಇಒ ಕಚೇರಿ ಆವಾರದಲ್ಲಿರುವ ಗೋದಾಮು ಸೋರುತ್ತಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಆದರೆ, ಗೋದಾಮು ಹಳೆಯದಾಗಿದ್ದು, ಬಹುಶಃ ಹೊಸದಾಗಿಯೇ ಕಟ್ಟ ಬೇಕಾಗಬಹುದು. ಈ ಬಗ್ಗೆ ಗೋದಾಮನ್ನು ನಾನೇ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.| ದಿನಕರ ಶೆಟ್ಟಿ ಶಾಸಕ ಕುಮಟಾ