

ತಿ.ನರಸೀಪುರ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಗುರುವಾರ ಸೇವಾ ಅವಧಿಯನ್ನು ಪೂರ್ಣಗೊಳಿಸಿ, ವಯೋನಿವೃತ್ತಿ ಹೊಂದಿದ ಮುಖ್ಯಾಧಿಕಾರಿ ಬಿ.ಕೆ.ವಸಂತಕುಮಾರಿ ಅವರನ್ನು ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.
ಪುರಸಭೆ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿ ವರ್ಗ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪ್ರಮುಖ ಮುಖಂಡರು ಹಾಗೂ ಸಾರ್ವಜನಿಕರು ನಿರ್ಗಮಿತ ಮುಖ್ಯಾಧಿಕಾರಿಯನ್ನು ಬೀಳ್ಕೊಟ್ಟರು.
ವಸಂತ ಕುಮಾರಿ ಮಾತನಾಡಿ, ಪುರಸಭೆಯಲ್ಲಿ ಮಹಿಳಾ ಅಧಿಕಾರಿಯಾಗಿ ಉತ್ತಮ ಕೆಲಸ ಮಾಡಿದ್ದೇನೆ ನಂಬಿಕೆ ನನ್ನಲ್ಲಿದೆ. ಸಹೋದ್ಯೋಗಿ ಅಧಿಕಾರಿ ವರ್ಗ, ಪುರಸಭೆ ಸದಸ್ಯರು ಮತ್ತು ಸಾರ್ವಜನಿಕರ ಸಹಕಾರ ಅವಿಸ್ಮರಣೀಯ. ತಿ.ನರಸೀಪುರ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರವಾಗಿರುವುದರಿಂದ ಹಲವು ಒತ್ತಡಗಳ ನಡುವೆಯೂ ಉತ್ತಮವಾಗಿ ಕಾರ್ಯ ನಿರ್ವಹಿಸಲು ಜಿಲ್ಲಾಧಿಕಾರಿಗಳು, ಜಿಲ್ಲಾ ಯೋಜನಾಧಿಕಾರಿಗಳು ಸಾಂದರ್ಭಿಕ ಉತ್ತಮ ಮಾರ್ಗದರ್ಶನ ಮತ್ತು ಸಹಕಾರ ನೀಡಿದ್ದಾರೆ ಎಂದು ಸ್ಮರಿಸಿದರು.
ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ತುಂಬಲ ಪ್ರಕಾಶ್ ಮಾತನಾಡಿ, ಮುಖ್ಯಾಧಿಕಾರಿಗಳು ಪುರಸಭೆಯಲ್ಲಿ ಉತ್ತಮ ಕಾರ್ಯ ಕೆಲಸಗಳನ್ನು ಮಾಡಿದ್ದು, ವಾರ್ಡ್‌ವಾರು ಕಂದಾಯ ಅದಾಲತ್ ನಡೆಸಿದ್ದು, ಅವರ ಆಡಳಿತ ವೈಖರಿಗೆ ಹಿಡಿದ ಕನ್ನಡಿ. ತಮ್ಮ ಮೆಲು ಮಾತಿನಿಂದ ಅಧಿಕಾರಿ ಮತ್ತು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥವಾಗಿ ಕೆಲಸಮಾಡಿದ್ದಾರೆ. ಅವರ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂದು ಆಶಿಸಿದರು.
ಉಪಾಧ್ಯಕ್ಷೆ ರಾಜೇಶ್ವರಿ ರಾಘವೇಂದ್ರ, ಮಾಜಿ ಅಧ್ಯಕ್ಷರಾದ ಎನ್. ಸೋಮು, ಎಸ್.ಮದನ್‌ರಾಜ್, ಸದಸ್ಯರಾದ ಸಿಸ್ಟಮ್ ಸಿದ್ದು, ಮಹದೇವಮ್ಮ, ಕಿರಣ್, ಮುದ್ದುಬೀರನಹುಂಡಿ ಗುರುಸ್ವಾಮಿ, ಜೋಗಿ ನಾಗರಾಜ್, ಮೆಡಿಕಲ್ ನಾಗರಾಜು, ಸಬಿಲ್ ಖಾನ್, ಮುಖಂಡರಾದ ರಜತ್ ಸ್ವಾಮಿ, ರಂಗುನಾಯಕ್, ಕಚೇರಿ ಸಿಬ್ಬಂದಿ ಮತ್ತು ಹಲವು ಮುಖಂಡರು ಇದ್ದರು.