

ಗುಂಡ್ಲುಪೇಟೆ: ಪುರಸಭೆ ಅಧಿಕಾರಿಗಳು ಪಟ್ಟಣದ ಹಲವು ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದಾರೆ.
ಪುರಸಭೆ ಮುಖ್ಯಾಧಿಕಾರಿ ಶರವಣ ಹಾಗೂ ಆರೋಗ್ಯ ಶಾಖೆಯ ತಂಡದವರು ಪಟ್ಟಣದ ಹಲವು ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿ ಸರ್ಕಾರ ನಿಷೇಧ ಮಾಡಿರುವ ಏಕ ಬಳಕೆ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಲೋಟ ಹಾಗೂ ಥರ್ಮಾಕೋಲ್ ಬೌಲ್ ಸೇರಿದಂತೆ ಸುಮಾರು ಐವತ್ತು ಕೆಜಿ ನಿಷೇಧಿತ ಪ್ಲಾಸ್ಟಿಕ್ ಸಾಮಗ್ರಿಗಳನ್ನು ವಶಪಡಿಸಿಕೊಂಡರು.
ಪ್ಲಾಸ್ಟಿಕ್ ಕವರ್ ಮಾರಾಟ ಮಾಡುತ್ತಿದ್ದ ನಾಲ್ಕು ಅಂಗಡಿಗಳಿಗೆ 4,500 ರೂ.ದಂಡ ವಿಧಿಸಿದರು. ಸರ್ಕಾರದ ನಿಯಮ ಉಲ್ಲಂಘಿಸಿ ಪ್ಲಾಸ್ಟಿಕ್ ಬಳಕೆ ಹಾಗೂ ಮಾರಾಟ ಮಾಡುವವರ ಲೈಸೆನ್ಸ್ ರದ್ದುಗೊಳಿಸಬೇಕಾಗುತ್ತದೆ. ಉದ್ದಿಮೆ ಪರವಾನಗಿ ಪಡೆಯದೆ ವ್ಯವಹಾರ ನಡೆಸುವವರ ಅಂಗಡಿ ಬಂದ್ ಮಾಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.