

ಭಟ್ಕಳ: ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ ಸಾವಿನ ಬಳಿಕ ಅವರ ನೇತ್ರದಾನದಿಂದ ಪ್ರೇರಿತರಾದ ಯುವಕನೊಬ್ಬ ಅನಾರೋಗ್ಯದಿಂದ ತನ್ನ ತಾಯಿಯ ನೇತ್ರವನ್ನು ಕುಟುಂಬದವರ ಒಪ್ಪಿಗೆ ಪಡೆದು ದಾನ ಮಾಡಿದ ಘಟನೆಗೆ ಭಟ್ಕಳ ಸರ್ಕಾರಿ ಆಸ್ಪತ್ರೆ ಸಾಕ್ಷಿಯಾಗಿದೆ.
ತಾಲೂಕಿನ ಶಿರಾಲಿಯ ಮತ್ತಿಗುಂಡಿ ನಿವಾಸಿ ಮಾಸ್ತಮ್ಮ ವೆಂಕಟಪ್ಪ ನಾಯ್ಕ (68) ನೇತ್ರದಾನ ಮಾಡಿದರವು.
ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯನ್ನು ಆ. 21ರಂದು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಮಗ ದಾಖಲಿಸಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಾಸ್ತಮ್ಮ ಸೆ. 1ರಂದು ಸಾವನ್ನಪ್ಪಿದ್ದಾರೆ. ತಾಯಿಯ ಸಾವಿನ ಬಳಿಕ ಮತ್ತೊಬ್ಬರಿಗೆ ತನ್ನ ತಾಯಿಯ ಕಣ್ಣು ಬೆಳಕಾಗಲಿ ಎಂಬ ಉದ್ದೇಶದಿಂದ ಕುಟುಂಬದವರ ಒಪ್ಪಿಗೆ ಪಡೆದ ಮಗ ಮಂಜುನಾಥ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಯ ಮೂಲಕ ಉಡುಪಿಯ ಪ್ರಸಾದ ನೇತ್ರಾಲಯಕ್ಕೆ ತಮ್ಮ ತಾಯಿಯ ನೇತ್ರ ದಾನ ಮಾಡಿದ್ದಾನೆ.
ಆಸ್ಪತ್ರೆಗೆ ಬಂದ ಉಡುಪಿಯ ಪ್ರಸಾದ ನೇತ್ರಾಲಯ ತಂಡ ನಿಯಮದ ಪ್ರಕಾರ ಕಣ್ಣನ್ನು ತೆಗೆದುಕೊಂಡು ತೆರಳಿದ್ದಾರೆ. ಈ ನೇತ್ರದಾನ ಪ್ರಕ್ರಿಯೆಯಲ್ಲಿ ತಾಲೂಕಾಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಸಹಕರಿಸಿದರು.