ಪುತ್ರನನ್ನು ಜನತೆಯ ಮಡಿಲಿಗೆ ಹಾಕುತ್ತಿದ್ದೇನೆ

18 NMG 04
Published on

ನಾಗಮಂಗಲ: ತಾಲೂಕಿನ ಜನತೆ ಈ ಹಿಂದೆ ನನಗೆ ಅಧಿಕಾರ ನೀಡಿ ಕೆಲಸ ಮಾಡಲು ಅವಕಾಶ ಕಲ್ಪಿಸಿದ್ದಿರಿ. ಅಂತೆಯೆ, ನನ್ನ ಪುತ್ರ ಎಲ್.ಎಸ್.ಚೇತನ್‌ಗೌಡನನ್ನು ನಿಮ್ಮ ಮಡಿಲಿಗೆ ಹಾಕುತ್ತಿದ್ದು, ಆತನನ್ನು ಆಶೀರ್ವದಿಸಿ ಬೆಳೆಸಬೇಕು ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮನವಿ ಮಾಡಿದರು.


ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಾಲಯದ ಆವರಣದಲ್ಲಿ ಶನಿವಾರ ರಾತ್ರಿ ಆಯೋಜಿಸಿದ್ದ ಕೃತಜ್ಞತಾ ಸಮಾವೇಶ ಹಾಗೂ ಎಲ್.ಎಸ್.ಚೇತನ್‌ಗೌಡ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಲವು ಚುನಾವಣೆಗಳಲ್ಲಿ ನನ್ನನ್ನು ಗೆಲ್ಲಿಸಿದ್ದೀರಿ, ಅದೇ ರೀತಿ ಕೆಲವು ಬಾರಿ ಸೋಲಿಸಿದ್ದೀರಿ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸುಧಾ ಶಿವರಾಮೇಗೌಡರಿಗೆ ಟಿಕೆಟ್ ನೀಡಿತ್ತು. ಒಂದು ಕಡೆ ನಾವು ಸೋತಿರುವ ನೋವಿದೆ. ನಾನು ಇದುವರೆಗೂ ಯಾರಿಂದಲೂ ಒಂದು ರೂಪಾಯಿ ಲಂಚ ಪಡೆದಿಲ್ಲ. ಆ ರೀತಿಯಲ್ಲಿ ನೀವು ಕೊಟ್ಟಿರುವ ಅಧಿಕಾರ ನಡೆಸಿದ್ದೇನೆ. ನನಗೆ ಮತ ಹಾಕಿರಲಿ, ಇಲ್ಲದಿರಲಿ ಎಲ್ಲರನ್ನೂ ಅಣ್ಣ ತಮ್ಮಂದಿರೆಂದು ಸ್ವೀಕಾರ ಮಾಡಿ ಅಧಿಕಾರವಿರಲಿ, ಇಲ್ಲದಿರಲಿ ಎಲ್ಲರ ಕೆಲಸ ಮಾಡಿಕೊಟ್ಟಿದ್ದೇನೆ ಎಂದು ಹೇಳಿದರು.


ನಮ್ಮ ಕುಟುಂಬ ಚುನಾವಣೆಯಲ್ಲಿ ಸೋತಿರಬಹುದು. ಆದರೆ, ನಾಗಮಂಗಲದಲ್ಲಿ ಭದ್ರವಾಗಿರಲಿದೆ. ಸೋತ ತಕ್ಷಣ ನಾಗಮಂಗಲ ಬಿಟ್ಟು ಹೋದರೆಂದು ಯಾರೂ ಹೇಳುವಂತಿಲ್ಲ. ನಮ್ಮನ್ನು ನಂಬಿರುವ ಜನ ಬೇರೆ ಪಕ್ಷದ ಯಾರ ಮನೆಗೂ ಹೋಗುವ ಅಗತ್ಯವಿಲ್ಲ. ಮಾಜಿ ಶಾಸಕ, ಮಾಜಿ ಸಂಸದ ಆಗಿದ್ದುಕೊಂಡೇ ಅಧಿಕಾರಿಗಳಿಗೆ ಚಡಿ ಏಟು ಹೊಡೆದು ಕೆಲಸ ಮಾಡಿಸಿಕೊಡುತ್ತೇನೆ. ಶಿವರಾಮೇಗೌಡರ ಕುಟುಂಬ ಕೇವಲ ಚುನಾವಣೆಗೋಸ್ಕರವಿಲ್ಲ. ನಂಬಿರುವ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತೇವೆ. 2028ರ ಚುನಾವಣೆಯಲ್ಲಿ ಮಗನನ್ನು ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು.


ಎಲ್.ಆರ್.ಶಿವರಾಮೇಗೌಡರ ಈ ನಡೆ ಅಚ್ಚರಿ ಮೂಡಿಸಿದೆ. ತಮ್ಮ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಡುವ ಮೂಲಕ ರಾಜಕೀಯ ನಿವೃತ್ತಿ ಘೋಷಿಸಿದರೆ ಎಂಬುದು ಚರ್ಚೆಯಾಗುತ್ತಿದೆ.


ಯುವಮುಖಂಡ ಎಲ್.ಎಸ್.ಚೇತನ್‌ಗೌಡ ಮಾತನಾಡಿ, ವಾರಕ್ಕೆ ಮೂರು ದಿನ ನಾನು ಹಾಗೂ ಇನ್ನು ಮೂರು ದಿನ ತಂದೆಯವರು ತಾಲೂಕಿನಲ್ಲಿದ್ದು ಜನರ ಕಷ್ಟ-ಸುಖಗಳನ್ನು ಆಲಿಸುತ್ತೇವೆ. ಇಲ್ಲಿ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಬಂದಿದ್ದೇನೆ. ಜನತೆ ಆಶೀರ್ವಾದ ಮಾಡಬೇಕು ಎಂದು ಕೋರಿದರು.
5 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಮುಖಂಡರಾದ ಮಂಜೇಗೌಡ, ತಾಪಂ ಮಾಜಿ ಸದಸ್ಯ ಹೇಮರಾಜು, ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ, ಪಾಳ್ಯರಘು, ಚೇತನ್, ಸೋಮ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net