ಪುಟಾಣಿಗಳಿಗೂ ಆನ್​ಲೈನ್ ಪಾಠ

kids
Published on

ರಾಜೇಂದ್ರ ಶಿಂಗನಮನೆ ಶಿರಸಿ

ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಈಗಾಗಲೇ ವಿದ್ಯಾಗಮ ಯೋಜನೆಯಲ್ಲಿ ಆನ್​ಲೈನ್ ಹಾಗೂ ಆಫ್​ಲೈನ್ ಮೂಲಕ ಶಿಕ್ಷಣ ಆರಂಭವಾಗಿದ್ದು, ಇದೀಗ ಅಂಗನವಾಡಿಯ ಪುಟ್ಟ ಮಕ್ಕಳಿಗೆ ಅವರವರ ಮನೆಯಲ್ಲಿಯೇ ಪಾಠ ಆರಂಭವಾಗಿದೆ.

ಕರೊನಾ ಕಾರಣಕ್ಕೆ ಅಂಗನವಾಡಿ ಕೇಂದ್ರದಲ್ಲಿ ಪಾಠ, ಚಟುವಟಿಕೆ ನಡೆಯುತ್ತಿಲ್ಲ. ಮಕ್ಕಳು ಕೇಂದ್ರಕ್ಕೆ ಬರುವಂತಿಲ್ಲ. ಹೀಗಾಗಿ, ಕಲಿಕೆಯಲ್ಲಿ ಹಿಂದೆ ಬೀಳಬಾರದೆಂಬ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ತಾಯಂದಿರಿಂದಲೇ ಪಾಠ ನಡೆಸಲು ಕ್ರಮ ವಹಿಸಲಾಗಿದೆ. ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು ಎಂಬ ವಾಕ್ಯ ಈ ಮಕ್ಕಳ ಮನೆಗಳಲ್ಲಿ ಅಕ್ಷರಶಃ ಅನುಷ್ಠಾನಗೊಂಡಿದೆ.

ವಾರಕ್ಕೊಂದು ವಿಷಯ: ಜಿಲ್ಲೆಯಲ್ಲಿ 2300ರಷ್ಟು ಅಂಗನವಾಡಿಗಳಿದ್ದು, ಅಂದಾಜು 47669ರಷ್ಟು 3ರಿಂದ 6 ವಯೋಮಾನದೊಳಗಿನ ಮಕ್ಕಳು ದಾಖಲಾಗಿದ್ದಾರೆ. ಆಯಾ ಅಂಗನವಾಡಿ ವ್ಯಾಪ್ತಿಯಲ್ಲಿ ಮೊಬೈಲ್​ಫೋನ್ ಇರುವ ತಾಯಂದಿರನ್ನು ಸಂರ್ಪಸಿ ವಾಟ್ಸ್ ಆಪ್ ಗ್ರೂಪ್ ಮಾಡಲಾಗಿದೆ. ಅಂಗನವಾಡಿ ಶಿಕ್ಷಕರು ತಾಯಂದಿರ ವಾಟ್ಸ್ ಆಪ್​ಗೆ ವಾರಕ್ಕೊಂದು ವಿಷಯ ನೀಡುತ್ತಿದ್ದು, ಮಕ್ಕಳಿಗೆ ಹೇಗೆ ಪಾಠ ಮಾಡಬೇಕೆಂದು ತಿಳಿಸಲಾಗುತ್ತಿದೆ. ಮಕ್ಕಳ ಚಟುವಟಿಕೆ ಬಗ್ಗೆ ಫೋಟೋ, ವಿಡಿಯೋ ಮಾಡಿ ಶಿಕ್ಷಕಿಗೆ ಕಳುಹಿಸಬೇಕಾಗಿದೆ. ಶಿಕ್ಷಕಿಯರು ಆ ಫೋಟೋ, ವಿಡಿಯೋಗಳನ್ನು ಪರಿಶೀಲಿಸುವ ಜತೆ ಮುಂದಿನ ಪಾಠವನ್ನು ನೀಡಬೇಕು. ಇದರ ಜತೆ ಅಂಗನವಾಡಿಯಿಂದ ಮನೆಗೇ ಆಹಾರ ಕೊಟ್ಟು, ಮನೆಯಲ್ಲಿಯೇ ಮಕ್ಕಳಿಗೆ ತಾಯಂದಿರು ಅಡುಗೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

ತಾಯಂದಿರ ವಾಟ್ಸ್ ಆಪ್ ಗ್ರೂಪ್: ಸಣ್ಣ ಮಕ್ಕಳಿಗೆ ಮೊಬೈಲ್ ಶಿಕ್ಷಣ ಸಾಧ್ಯವಿಲ್ಲದ ಕಾರಣ ಜಿಲ್ಲೆಯ ಎಲ್ಲ ಅಂಗನವಾಡಿ ಮಕ್ಕಳ ತಾಯಂದಿರ ವಾಟ್ಸ್ ಆಪ್ ಗ್ರೂಪ್ ಮಾಡಲಾಗಿದೆ. ಅಂಗನವಾಡಿ ಶಿಕ್ಷಕಿ ವಾರಕ್ಕೊಮ್ಮೆ ಎಲ್ಲ ಮನೆಗಳಿಗೆ ಭೇಟಿ ನೀಡಿ, ಮಕ್ಕಳ ಚಟುವಟಿಕೆಗಳನ್ನು ಪರಿಶೀಲನೆ ಮಾಡಿ ಮಾರ್ಗದರ್ಶನ ನೀಡುತ್ತಾರೆ. ತಾಯಂದಿರ ಸಭೆ ಹಾಗೂ ಬಾಲ ವಿಕಾಸ ಸಮಿತಿಯ ಸಭೆಯಲ್ಲಿಯೂ ಈ ಬಗ್ಗೆ ಹೇಳಲಾಗುತ್ತದೆ.

ಕರೊನಾ ಕಾರಣಕ್ಕೆ ಅಂಗನವಾಡಿ ಶಿಕ್ಷಕಿಯರಿಗೆ ಮಕ್ಕಳ ಜತೆ ಇರಲು ಸಾಧ್ಯವಿಲ್ಲ. ಅಲ್ಲದೆ, ಪ್ರತಿ ಮನೆಗೆ ನಿತ್ಯವೂ ಭೇಟಿ ನೀಡಿ ಕಲಿಸಲು ಅಸಾಧ್ಯ. ಹೀಗಾಗಿ, ವಾಟ್ಸ್ ಆಪ್ ಬಳಸುವ ತಾಯಂದಿರ ಗ್ರೂಪ್ ಮಾಡಿ ಅದರಲ್ಲಿಯೇ ಚಟುವಟಿಕೆಗಳ ವಿಡಿಯೋ ಕಳುಹಿಸಲಾಗುತ್ತದೆ. ಮಕ್ಕಳಿಗೆ ಶಾಲಾಪೂರ್ವ ಶಿಕ್ಷಣದಲ್ಲಿ ಆಸಕ್ತಿ ಮೂಡಿಸಲು ತಾಯಂದಿರ ಮೂಲಕ ಮನೆಯಲ್ಲಿಯೇ ಆಟ, ಪಾಠ ಕಲಿಸುವ ಈ ಕಾರ್ಯಕ್ರಮ ಆಕರ್ಷಣೀಯವಾಗಿದೆ. ಮಕ್ಕಳ ಎಲ್ಲಾ ಬೆಳವಣಿಗೆಗೆ ಪೂರಕವಾದ ಚಟುವಟಿಕೆಗಳನ್ನು ದಿನವೂ ಮಾಡಲಾಗುತ್ತದೆ. | ಶ್ರೀಲೇಖಾ ವೈದ್ಯ ಅಂಗನವಾಡಿ ಶಿಕ್ಷಕಿ

ಅಂಗನವಾಡಿ ಮಕ್ಕಳಿಗೆ ಮನೆಯಲ್ಲಿ ತಾಯಂದಿರಿಂದಲೇ ಪಾಠ ಎಂಬ ಪರಿಕಲ್ಪನೆಯನ್ನು ಕರೊನಾ ಕಾಲಘಟ್ಟದಲ್ಲಿ ಆರಂಭಿಸಲಾಗಿದೆ. ಮಕ್ಕಳಿಗೆ ಹೇಗೆ, ಏನೇನು ಕಲಿಸಬೇಕೆಂಬುದನ್ನು ಅಂಗನವಾಡಿ ಶಿಕ್ಷಕಿಯರು ವಾಟ್ಸ್ ಆಪ್ ಮುಖಾಂತರ ಪ್ರತಿ ದಿನ ಒಂದೊಂದು ಥಿಮ್ಳನ್ನು ಶೇರ್ ಮಾಡುತ್ತಾರೆ. ಪ್ರತಿ ಅಂಗನವಾಡಿಯಲ್ಲಿಯೂ ಮಕ್ಕಳ ತಾಯಂದಿರ ವಾಟ್ಸ್ ಆಪ್ ಗ್ರೂಪ್​ಗಳನ್ನು ರಚಿಸಿಕೊಳ್ಳಲಾಗಿದ್ದು, ಕಾರ್ಯಕರ್ತೆಯರು ಥಿಮ್ಳನ್ನು ತಾಯಂದಿರಿಗೆ ಕಳುಹಿಸಿಕೊಡುತ್ತಾರೆ. ಹೀಗಾಗಿ ಪುಟ್ಟ ಮಕ್ಕಳಿಗೂ ಕಲಿಕೆ ಅಡತಡೆ ಇಲ್ಲದೆ ಸಾಗಿದೆ. | ದತ್ತಾತ್ರೇಯ ಭಟ್ಟ ಸಿಡಿಪಿಒ ಶಿರಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net