ಪಿಎಸ್‌ಎಸ್‌ಕೆಗೆ ಬೀಗ

27-pnp 1a
Published on

ಪಾಂಡವಪುರ: ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಎಂಆರ್‌ಎನ್ ಸಂಸ್ಥೆ ನಿಯಮ ಮೀರಿ ಆಡಳಿತ ನಡೆಸುತ್ತಿದ್ದು, ಗುತ್ತಿಗೆ ನೌಕರರನ್ನು ವಿನಾಕಾರಣ ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ ಎಂದು ಆರೋಪಿಸಿ ರೈತಸಂಘದ ಕಾರ್ಯಕರ್ತರು ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಬುಧವಾರ ಕಾರ್ಖಾನೆಯನ್ನು ಲಾಕ್‌ಔಟ್ ಮಾಡಿಸಿದರು.

ಇಲ್ಲಿನ ರೈಲ್ವೆ ನಿಲ್ದಾಣ ಸಮೀಪವಿರುವ ಕಾರ್ಖಾನೆ ಮುಂಭಾಗ ಶಾಸಕ ದಶರ್ನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಜಮಾವಣೆಗೊಂಡ ಕಾರ್ಖಾನೆ ಗುತ್ತಿಗೆ ನೌಕರರು ಮತ್ತು ರೈತಸಂಘ ಕಾರ್ಯಕರ್ತರು ಎಂಆರ್‌ಎನ್ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯ ವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಜಯ್ ನಿರಾಣಿ ಅವರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಕರೆ ಸ್ವೀಕರಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿಲ್ಲ. ಕಳೆದೊಂದು ತಿಂಗಳಿನಿಂದ ನೌಕರರು ಪ್ರತಿಭಟನೆ ನಡೆಸುತ್ತಿದ್ದರು ಅದಕ್ಕೆ ಮನ್ನಣೆ ನೀಡದೆ ಹಠಕ್ಕೆ ಬಿದ್ದವರಂತೆ ವರ್ತಿಸುತ್ತಿದ್ದಾರೆ. ನೌಕರರನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಹೈಕೋರ್ಟ್ ನೀಡಿರುವ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.

ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳ ಅವಧಿಗೆ 405 ಕೋಟಿ ರೂ.ಗೆ ಮುರುಗೇಶ್ ಆರ್.ನಿರಾಣಿ ಒಡೆತನದ ಎಂಆರ್‌ಎನ್ ಸಂಸ್ಥೆ ಗುತ್ತಿಗೆ ಪಡೆದಿದೆ. ಸರ್ಕಾರ ಮತ್ತು ಎಂಆರ್‌ಎನ್ ಸಂಸ್ಥೆ ನಡುವೆ ನಡೆದಿರುವ ಗುತ್ತಿಗೆ ಕರಾರನಂತೆ ನಡೆದುಕೊಳ್ಳುತ್ತಿಲ್ಲ. ಎಂಆರ್‌ಎನ್ ಸಂಸ್ಥೆ ಕಾರ್ಖಾನೆ ಗುತ್ತಿಗೆ ಪಡೆಯುವ ಸಂದರ್ಭದಲ್ಲಿ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಕರಾರು ಏರ್ಪಟ್ಟಿದೆ. ಇದರಂತೆ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಉದ್ದೇಶಪೂರ್ವಕವಾಗಿ ಪಿಎಸ್‌ಎಸ್‌ಕೆ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸಲಾಗಿದೆ. ಎಂಆರ್‌ಎನ್ ಸಂಸ್ಥೆ ಪಿಎಸ್‌ಎಸ್‌ಕೆ ಕಾರ್ಮಿಕರ ಯಾವುದೇ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಪ್ರತಿ ಬಾರಿ ನೌಕರರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ದೂರಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಎಂಆರ್‌ಎನ್ ಸಂಸ್ಥೆಯ ಮುಖ್ಯಸ್ಥರೊಂದಿಗೆ ನೌಕರರ ವಿಚಾರದ ಜತೆಗೆ ಹಲವು ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿದ್ದರೂ ಯಾವುದಕ್ಕೂ ಸ್ಪಂದಿಸುತ್ತಿಲ್ಲ. ನ್ಯಾಯಾಲಯ ಆದೇಶಕ್ಕೂ ಕಿಮ್ಮತ್ತು ಕೊಡುತ್ತಿಲ್ಲ. ನಮ್ಮ ಮಾತಿಗೂ ಮನ್ನಣೆ ಕೊಟ್ಟಿಲ್ಲ. ಕಾರ್ಖಾನೆ ಆಡಳಿತ ಮಂಡಳಿಯವರಿಗೆ ನೌಕರರನ್ನು ಕೆಲಸಕ್ಕೆ ತೆಗೆದುಕೊಂಡು ಗುತ್ತಿಗೆ ಕರಾರಿನಂತೆ ಕಾರ್ಖಾನೆ ನಡೆಸಿಕೊಂಡು ಹೋಗಿ ಎಂದು ಸಲಹೆ ನೀಡಿದ್ದೆವು. ಆದರೆ ಅವರು ಕಾರ್ಖಾನೆಯನ್ನು ಮುಚ್ಚುತ್ತೇವೆ ಹೊರತು ಯಾವುದೇ ಬೇಡಿಕೆ ಈಡೇರಿಸುವುದಿಲ್ಲ ಎಂದು ತಿಳಿಸಿದ್ದಾರೆ. ಅವರು ಕಾರ್ಖಾನೆ ಮುಚ್ಚಿಕೊಂಡು ಹೋಗಲಿ, ರೈತರಿಗೆ ತೊಂದರೆಯಾಗದಂತೆ ಯಾವ ರೀತಿ ಕಾರ್ಖಾನೆ ನಡೆಸಬೇಕು ಎಂದು ಸರ್ಕಾರದೊಂದಿಗೆ ಚರ್ಚಿಸಿ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಶಾಸಕರೊಂದಿಗೆ ಮಾತುಕತೆಗೆ ಮುಂದಾಗದ ಕಾರ್ಖಾನೆ ಅಧಿಕಾರಿಗಳು ಸಿಬ್ಬಂದಿಯನ್ನು ಹೊರ ಕಳುಹಿಸಿ ಕಾರ್ಖಾನೆಗೆ ಬೀಗ ಹಾಕಿಸಿದರು.

ರೈತಸಂಘ ತಾಲೂಕು ಅಧ್ಯಕ್ಷ ಕೆನ್ನಾಳು ವಿಜಯಕುಮಾರ್, ಮಾಜಿ ಅಧ್ಯಕ್ಷ ನಾಗರಾಜು, ಮುಖಂಡರಾದ ರಾಘವ ಪ್ರಕಾಶ್, ಎಣ್ಣೆಹೊಳೆಕೊಪ್ಪಲು ವೈ.ಪಿ.ಮಂಜು, ವೈ.ಜಿ.ರಾಘು ಇತರರು ಇದ್ದರು.

-------------

ಆಸ್ತಿ ಲಪಟಾಯಿಸುವ ಹುನ್ನಾರ

ಎಂಆರ್‌ಎನ್ ಸಂಸ್ಥೆ ಮತ್ತು ಸರ್ಕಾರದ ನಡುವೆ ಕಾರ್ಖಾನೆ ಗುತ್ತಿಗೆ ನೀಡುವ ವಿಚಾರವಾಗಿ ಕರಾರು ಏರ್ಪಟ್ಟಿದೆ. ಅದರಂತೆ ಸಂಸ್ಥೆ ನಡೆದುಕೊಳ್ಳುತ್ತಿಲ್ಲ. ಕಾರ್ಖಾನೆಯಲ್ಲಿ ಡಿಸಿಸಿ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದ್ದರೂ ಅದರ ಮೂಲಕ ರೈತರಿಗೆ ಕಬ್ಬಿನ ಬಿಲ್ ಪಾವತಿಸುತ್ತಿಲ್ಲ. ತಮ್ಮದೇ ಪ್ರತ್ಯೇಕ ಬ್ಯಾಂಕ್ ತೆರೆದಿದ್ದಾರೆ. ಆ ಬ್ಯಾಂಕ್‌ನಲ್ಲಿ ಖಾತೆ ತೆರೆಯದಿದ್ದರೆ ರೈತರಿಗೆ ಪೇಮೆಂಟ್ ಮಾಡುವುದಿಲ್ಲ. ಪಿಎಸ್‌ಎಸ್‌ಕೆ ಕಾರ್ಖಾನೆ ಸಹಕಾರಿ ಕ್ಷೇತ್ರದಲ್ಲಿದ್ದಾಗ ವಿವಿಧ ಬ್ಯಾಂಕ್‌ಗಳಿಂದ ನೂರಾರು ಕೋಟಿ ರೂ. ಸಾಲ ಪಡೆದುಕೊಳ್ಳಲಾಗಿದೆ. ಇದನ್ನು ತೀರಿಸುವ ಯಾವುದೇ ನಿರ್ಧಾರಗಳು ಎಂಆರ್‌ಎನ್ ಸಂಸ್ಥೆಯ ಮುಂದಿಲ್ಲ. ಇದರಿಂದ ಕಾರ್ಖಾನೆ ಆಸ್ತಿ ಹರಾಜಿಗೆ ಬರಬಹುದು. ಆಗ ಪಿಎಸ್‌ಎಸ್‌ಕೆ ಕಾರ್ಖಾನೆ ಆಸ್ತಿ ಖಾಸಗಿಯವರ ಪಾಲಾಗಬಹುದು. ಇದರ ಹಿಂದೆ ಬಹುದೊಡ್ಡ ಹುನ್ನಾರ ನಡೆದಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಆರೋಪಿಸಿದರು.

ಕಾರ್ಖಾನೆ ಕಬ್ಬು ಅರೆಯುತ್ತಿರುವುದರಿಂದ ಈ ಭಾಗದ ರೈತರಿಗೆ ಅನುಕೂಲವಾಗಿದೆ ಅಂದ ಮಾತ್ರಕ್ಕೆ ಎಂಆರ್‌ಎನ್ ಸಂಸ್ಥೆ ಇಷ್ಟ ಬಂದಂತೆ ಆಡಳಿತ ನಡೆಸಿದರೆ ನಾವು ಸಹಿಸಲು ಸಾಧ್ಯವಿಲ್ಲ. ರೈತರು ಮತ್ತು ನೌಕರರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ನಾವು ಕಾರ್ಖಾನೆ ಬಿಟ್ಟು ಹೊರಗೆ ಹೋಗುತ್ತೇವೆ ಎಂದಿದ್ದಾರೆ. ಅದಕ್ಕಾಗಿ ಸಹಕಾರ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರಿಗೆ ಕಾರ್ಖಾನೆಯನ್ನು ವಶಕ್ಕೆ ಪಡೆದು ಸೂಕ್ತ ರಕ್ಷಣೆ ನೀಡುವಂತೆ ತಿಳಿಸಿದ್ದೇವೆ. ರೈತರಿಗೆ ತೊಂದರೆಯಗದಂತೆ ಕಾರ್ಖಾನೆ ಮುಂದುವರಿಸಲು ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net