

ಯಳಂದೂರು: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಂ.ಪಿ.ನಿರಂಜನಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ಭೀಮಪ್ಪ ತಲಾ 9 ಮತಗಳನ್ನು ಪಡೆಯುವ ಮೂಲಕ ಜಯಶೀಲರಾದರು.
ಸೋಮವಾರ ಪಟ್ಟಣದ ಬ್ಯಾಂಕ್‌ನಲ್ಲಿ ಇವೆರೆಡು ಸ್ಥಾನಕ್ಕೆ ಚುನಾವಣೆಗಳು ನಡೆದವು. ಒಟ್ಟು 15 ಮಂದಿ ನಿರ್ದೇಶಕರು ಇದ್ದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಎಂ.ಪಿ.ನಿರಂಜನಮೂರ್ತಿ ಹಾಗೂ ಸಿದ್ದಪ್ಪಸ್ವಾಮಿ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಭೀಮಪ್ಪ ಹಾಗೂ ಸೋಮಣ್ಣ ಎಂಬುವರು ಅರ್ಜಿ ಸಲ್ಲಿಸಿದ್ದರು.
ಒಟ್ಟು 15 ನಿರ್ದೇಶಕರಲ್ಲಿ ರಾಜಮ್ಮ ಎಂಬುವರು ಮಾತ್ರ ಗೈರಾಗಿದ್ದರು. ಇದರಲ್ಲಿ ಎಂ.ಪಿ.ನಿರಂಜನಮೂರ್ತಿ 9, ಸಿದ್ದಪ್ಪಸ್ವಾಮಿ 5 ಹಾಗೂ ಭೀಮಪ್ಪ 9, ಸೋಮಣ್ಣ 5 ಮತಗಳ ಪಡೆದರು. ಇದರಿಂದ 4 ಮತಗಳ ಅಂತರದಿಂದ ನಿರಂಜನ ಮೂರ್ತಿ ಹಾಗೂ ಭೀಮಪ್ಪ ಜಯಶೀಲರಾದರು ಎಂದು ಚುನಾವಣಾಧಿಕಾರಿ ಸುಭಾಷಿಣಿ ಇವರಿಬ್ಬರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು.
ಈ ಸಂಧರ್ಭದಲ್ಲಿ ನೂತನ ಅಧ್ಯಕ್ಷರಾಗಿ ಜಯಶೀಲರಾದ ಎಂ.ಕೆ.ನಿರಂಜನಮೂರ್ತಿ ಮಾತನಾಡಿ, ಯಳಂದೂರು ತಾಲೂಕಿನಲ್ಲಿ ನಾನು ಸತತವಾಗಿ 2ನೇ ಬಾರಿ ಅಧ್ಯಕ್ಷನಾಗಿ ಆಯ್ಕೆಯಾಗುತ್ತಿರುವುದು ಸಂತಸ ತಂದಿದೆ. ಈ ಹಿಂದೆ ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ನಮ್ಮ ಬ್ಯಾಂಕಿನ ವಹಿವಾಟು 38 ಲಕ್ಷ ರೂ.ಇತ್ತು. ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ನಿರ್ದೇಶರಾಗಿರುವ ಮಹದೇವಪ್ಪ ಅವರು ನಮ್ಮ ಸಂಘವನ್ನು ಬಲಗೊಳಿಸುವ ನಿಟ್ಟಿನಲ್ಲಿ ಹೆಚ್ಚಿನ ಸಾಲ ನೀಡಿದ್ದರಿಂದ ಈಗ 7 ಕೋಟಿ ರೂ.ವಹಿವಾಟು ಇಲ್ಲಿ ನಡೆಯುತ್ತಿದ್ದು, ಮುಂದೆ ಇದನ್ನು ಇನ್ನಷ್ಟು ವೃದ್ಧಿಗೊಳಿಸಲು ಹಾಗೂ ಸಂಘಕ್ಕೆ ಸದಸ್ಯರ ಬಲವನ್ನು ಮತ್ತಷ್ಟು ಹೆಚ್ಚಿಸಲು ನಾನು ಶ್ರಮ ಪಡುತ್ತೇನೆ. ನನ್ನ ಗೆಲುವಿಗೆ ಪಕ್ಷಾತೀತವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದರು.
ಮೈಸೂರು ಹಾಗೂ ಚಾಮರಾಜನಗರದ ನಿರ್ದೇಶಕ ಮಹದೇವಪ್ಪ ನಿರ್ದೇಶಕರಾದ ಜಿ.ಸತೀಶ್, ವೃಷಭೇಂದ್ರಪ್ಪ, ಮಲ್ಲಣ್ಣ, ಶಿವಣ್ಣ, ಲಿಂಗರಾಜು, ರಶ್ಮಿ, ರಾಜಶೇಖರ್, ರಾಜಮ್ಮ, ಸತೀಶ್ ನಾಮ ನಿರ್ದೇಶಿತ ಸದಸ್ಯರಾದ ಮಹದೇವಸ್ವಾಮಿ ಮುಖಂಡರಾದ ಕೃಷಿಕ ಸಮಾಜದ ಗೌಡಹಳ್ಳಿ ರವಿ, ಕಂದಹಳ್ಳಿ ಮಹೇಶ್, ಹೊನ್ನೂರು ಚಿನ್ನಪ್ಪ, ಪ್ರಭುಸ್ವಾಮಿ, ಮೆಳ್ಳಹಳ್ಳಿ ಪುಟ್ಟಣ್ಣ, ಚಾಮಲಾಪುರ ವಿಜಯ್ ಬ್ಯಾಂಕಿನ ವ್ಯವಸ್ಥಾಪಕಿ ಎಚ್.ಎಸ್.ಮಧು ಮತ್ತಿತರರಿದ್ದರು.