

ಹಳೇಬೀಡು: ಪಾಶ್ಚಾತ್ಯರ ಅನುಕರಣೆಯನ್ನು ಬಿಟ್ಟು, ನಮ್ಮ ಪ್ರಾಚೀನ ಶ್ರೀಮಂತ ಪರಂಪರೆಯನ್ನು ಇಂದಿನ ಯುವಜನರು ಗೌರವಿಸಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಕರೆ ನೀಡಿದರು.
ಹಳೆಬೀಡು ಹೋಬಳಿಯ ಗೋಣಿಸೋಮನಹಳ್ಳಿ ಶ್ರೀ ಹುಲಿಕಲ್ಲು ವೀರಭದ್ರೇಶ್ವರಸ್ವಾಮಿ ದೇವಸ್ಥಾನದ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ನಾಡನ್ನು ಕಟ್ಟಿದ ಹೊಯ್ಸಳರು ಶಿಲೆಯಲ್ಲಿ ಕಲೆಯನ್ನು ಅರಳಿಸಿದ್ದಾರೆ. ಕಲಾಪರಂಪರೆಗೆ ದೊಡ್ಡ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಪರಂಪರೆ ಶ್ರೀಮಂತವಾಗಿದ್ದು, ಇದನ್ನು ಇಂದಿನ ಯುವಜನರಿಗೆ ತಿಳಿ ಹೇಳುವ ಅಗತ್ಯವಿದೆ ಎಂದರು.
ಸರ್ವರಿಗೂ ಸಮಪಾಲು, ಸಮಸಮಾಜದ ಕಲ್ಪನೆಯನ್ನು ಬಸವಾದಿ ಶರಣರು 12ನೇ ಶತಮಾನದಲ್ಲೇ ಪ್ರತಿಪಾದಿಸಿದರು. ಸಾಮಾಜಿಕ ಬದಲಾವಣೆಗೆ ಅವರು ನೀಡಿದ ಕೊಡುಗೆ ಅನುಪಮ ಎಂದ ಅವರು, ಆಧುನಿಕ ಕರ್ನಾಟಕದ ಪ್ರಗತಿಗೆ ವೀರಶೈವ ಲಿಂಗಾಯತ ಮಠ ಮಾನ್ಯಗಳು ನೀಡಿರುವ ಕೊಡುಗೆಯೂ ಅನನ್ಯ ಎಂದರು.
ಜಾತಿ, ಧರ್ಮ, ಜನಾಂಗದ ಭೇದವಿಲ್ಲದೆ ಸರ್ವರಿಗೂ ಆಶ್ರಯ, ಅನ್ನ, ಅಕ್ಷರವೆಂಬ ತ್ರಿವಿಧ ದಾಸೋಹ ಮಾಡುತ್ತಿರುವ ನಮ್ಮ ಮಠ ಮಾನ್ಯಗಳು ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿವೆ ಎಂದರು.
ಮಕ್ಕಳಿಗೆ ಭಾರತೀಯ ಪ್ರಾಚೀನ ಸಂಸ್ಕೃತಿಯ ಪರಿಚಯ ಮಾಡಿಸಬೇಕು. ಇಂದು ಯುವಜನರು ಮದ್ಯ, ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದಾರೆ. ತಾಯಂದಿರು ಮಕ್ಕಳಿಗೆ ಬಾಲ್ಯದಿಂದಲೇ ವಚನಗಳನ್ನು ಕಲಿಸಿದರೆ ಜೀವ ನದರ್ಶನ ಆಗುತ್ತದೆ. ಮಕ್ಕಳ ಬದುಕು ಹಸನಾಗುತ್ತದೆ ಎಂದರು.
ಸುಂದರ ಬದುಕಿಗೆ ಸೋಪಾನ ಅರಣ್ಯ : ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಪ್ರತಿಪಾದಿಸಿದ ಈಶ್ವರ ಖಂಡ್ರೆ, ಕಾಡಿದ್ದರೆ ಮಳೆ ಆಗುತ್ತದೆ. ಕಾಡಿದ್ದರೆ ಹಸಿರು ಹೊದಿಕೆ ಹೆಚ್ಚುತ್ತದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಕಾಲಘಟ್ಟದಲ್ಲಿ ಸುಂದರ ಬದುಕಿಗೆ ಸೋಪಾನವಾಗುತ್ತದೆ ಎಂದರು.
ನಮ್ಮ ಪೂರ್ವಿಕರು ಬೆಟ್ಟ, ಗುಡ್ಡಗಳ ಮೇಲೆ ದೇವಾಲಯ ನಿರ್ಮಿಸುವ ಮೂಲಕ ಪ್ರಕೃತಿ, ಪರಿಸರ ಉಳಿಸಿದ್ದಾರೆ. ಬೆಟ್ಟದ ಮೇಲೆ ದೇವಾಲಯ ಇರುವ ಕಾರಣ ಆ ಗುಡ್ಡಗಳನ್ನು, ಬೆಟ್ಟಗಳನ್ನು ಯಾರೂ ನಾಶ ಮಾಡಿಲ್ಲ. ನಮ್ಮ ಪೂರ್ವಿಕರ ದೂರದೃಷ್ಟಿ ಅಮೂಲ್ಯವಾದದ್ದು ಎಂದರು.
ಅರಣ್ಯ ಸಚಿವರಾದ ತರುವಾಯ ನಾನು 7ನೇ ಬಾರಿಗೆ ಹಾಸನ ಜಿಲ್ಲೆಗೆ ಬಂದಿದ್ದು, ಇಲ್ಲಿನ ಮಾನವ- ವನ್ಯಜೀವಿ ಸಂಘರ್ಷವನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದರು.
ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಹುಲಿಕಲ್ ವೀರಭದ್ರೇಶ್ವರ ದೇಗುಲದ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದರು
ಶಾಸಕ ಎಚ್.ಕೆ.ಸುರೇಶ್, ಮಾಜಿ ಶಾಸಕ ಲಿಂಗೇಶ್ ಮಾತನಾಡಿದರು. ತಿಪಟೂರು ತಾಲೂಕು ಕೆರಗೋಡಿ ರಂಗಾಪುರದ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿ, ಪುಷ್ಪಗಿರಿ ಮಹಾ ಸಂಸ್ಥಾನ, ಹಳೇಬೀಡಿನ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಶಿವಗಂಗಾ ಗ್ರಾನೈಟ್ ಮಾಲೀಕ ಎಚ್.ಎಸ್.ರಾಜಶೇಖರ್, ಬಸವರಾಜ್, ಗಂಗೂರು ಶಿವಕುಮಾರ್ ಇದ್ದರು.