

ಯು.ಎಸ್. ಪಾಟೀಲ ದಾಂಡೇಲಿ
ನಗರದ ಜ್ಞಾನೇಶ್ವರ ಮಂದಿರ ಹಿಂಭಾಗದಲ್ಲಿರುವ ಕೆಲ ಪೊಲೀಸ್ ವಸತಿಗೃಹಗಳು ಪಾಳು ಬಿದ್ದಿದ್ದು, ಭೂತ ಬಂಗಲೆಯಂತಾಗಿವೆ.
ಅಂದಾಜು 40 ವರ್ಷಗಳ ಹಿಂದೆ 26 ಮನೆಗಳನ್ನು ನಿರ್ವಿುಸಲಾಗಿತ್ತು. ಅದರಲ್ಲಿ 9 ಮನೆಗಳು ಮಾತ್ರ ಬಳಕೆಯಲ್ಲಿದ್ದು, 17 ಮನೆಗಳು ಬಳಕೆಯಲ್ಲಿಲ್ಲ. ಅವುಗಳ ಕಿಟಕಿ, ಬಾಗಿಲುಗಳು ಮಾಯವಾಗಿವೆ. ಗೋಡೆಗಳನ್ನಪ್ಪಿ ಬಳ್ಳಿಗಳು ಬೆಳೆದುಕೊಂಡಿವೆ. ಈ ಪಾಳು ಮನೆಗಳು ಜೂಜಾಟ, ಕುಡುಕರ ಕೇಂದ್ರಗಳಾಗಿವೆ. ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುವ ಜನ ಇದನ್ನು ನೋಡಿ ಅಸಹ್ಯ ಪಟ್ಟುಕೊಳ್ಳುವಂತಾಗಿದೆ.
9 ಮನೆಗಳನ್ನು ಪೊಲೀಸ್ ಸಿಬ್ಬಂದಿ ಬಳಕೆ ಮಾಡುತ್ತಿದ್ದಾರೆ. ಆದರೆ, ಅವೂ ಸುಸಜ್ಜಿತವಾಗಿಲ್ಲ. ಮೇಲ್ಛಾವಣಿ ಸೋರುತ್ತದೆ. ಗೋಡೆಗಳು ಮಾಸಿವೆ. ಕಿಟಕಿ, ಬಾಗಿಲುಗಳು ಸರಿಯಾಗಿಲ್ಲ. ಒಟ್ಟಾರೆ ಪೊಲೀಸ್ ಸಿಬ್ಬಂದಿ ಕಷ್ಟಪಟ್ಟು ವಾಸಿಸುವ ಪರಿಸ್ಥಿತಿ ಬಂದಿದೆ. 15 ವರ್ಷಗಳ ಹಿಂದೆ ಕಟ್ಟಡಗಳ ಪರಿವೀಕ್ಷಣೆ ನಡೆಸಿದ ಸ್ಥಳೀಯ ಲೋಕೋಪಯೋಗಿ ಇಲಾಖೆ ಇಂಜಿನಿಯರ್ಗಳು ಈ ವಸತಿಗೃಹಗಳು ವಾಸಕ್ಕೆ ಯೋಗ್ಯವಲ್ಲ ಎಂದು ವರದಿ ನೀಡಿದ್ದಾರೆ. ಮನೆಗಳನ್ನು ನೆಲಸಮ ಮಾಡಿ ನೂತನ ಕಟ್ಟಡ ನಿರ್ವಿುಸಬೇಕೆಂದು ಪೊಲೀಸ್ ಇಲಾಖೆಗೆ ಲಿಖಿತ ವರದಿ ಸಲ್ಲಿಸಿದ್ದರು. ಆದರೆ, ಪೊಲೀಸ್ ಇಲಾಖೆಯಿಂದಾಗಲಿ ಅಥವಾ ಈ ಮನೆಗಳ ಉಸ್ತುವಾರಿ ವಹಿಸಿರುವ ಬೆಂಗಳೂರಿನ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವಾಗಲಿ ಇತ್ತ ಗಮನ ಹರಿಸಿಲ್ಲ. ಶಹರ ಠಾಣೆ, ಗ್ರಾಮೀಣ ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿ ಇಲ್ಲಿದ್ದು, ನೂರರಷ್ಟು ಪೊಲೀಸ್ ಸಿಬ್ಬಂದಿ ಇದೆ.
ಎಲ್ಲ ಪೊಲೀಸ್ ಸಿಬ್ಬಂದಿಗೆ ವಸತಿಗೃಹ ಕಲ್ಪಿಸುವ ಸಲುವಾಗಿ ಗೃಹ-2020 ಎಂಬ ಯೋಜನೆಯನ್ನು ಇಲಾಖೆ ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಕಾರವಾರ, ದಾಂಡೇಲಿ ಸೇರಿ ವಿವಿಧೆಡೆ ಪೊಲೀಸ್ ವಸತಿಗೃಹಗಳು ಮಂಜೂರಾಗಿವೆ. ಹಣ ಬಿಡುಗಡೆಯಾದ ನಂತರ ಕಾಮಗಾರಿ ನಡೆಯಲಿದೆ. ಎಲ್ಲ ಸಿಬ್ಬಂದಿಗೆ ಹಂತ, ಹಂತವಾಗಿ ಮನೆಯ ಭಾಗ್ಯ ದೊರೆಯಲಿದೆ.| ಶಿವಪ್ರಕಾಶ ದೇವರಾಜು ಎಸ್ಪಿ ಉತ್ತರ ಕನ್ನಡ