

ಗೋಣಿಕೊಪ್ಪಲು: ಪಾಳು ಬಿಟ್ಟಿದ್ದ ಗದ್ದೆಯನ್ನು ಗುತ್ತಿಗೆ ಪಡೆದುಕೊಂಡು ಯಾಂತ್ರೀಕೃತ ಬೇಸಾಯದ ಮೂಲಕ ‘ತೆಲಂಗಾಣ ಸೋನಾ’ ಎಂಬ ವಿಶೇಷ ತಳಿಯ ಭತ್ತವನ್ನು ಬೆಳೆಯಲು ದಕ್ಷಿಣ ಕೊಡಗಿನ ರೈತರೊಬ್ಬರು ಮುಂದಾಗಿದ್ದಾರೆ.
ಪೊನ್ನಂಪೇಟೆ ತಾಲೂಕಿನ ಬೇಗೂರು ಗ್ರಾಮದ ಚೀನಿವಾಡ ಎಂಬಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಯಂತ್ರದ ಮೂಲಕ ಭತ್ತದ ಕೃಷಿಯಲ್ಲಿ ಕೃಷಿಕ ಮತ್ರಂಡ ಪ್ರವೀಣ್ ಕುಶಾಲಪ್ಪ ಎಂಬುವರು ತೊಡಗಿದ್ದಾರೆ. ಮಲಚ್ಚರ ರವಿ ಹಾಗೂ ಮುತ್ತಪ್ಪ ಎಂಬುವರಿಗೆ ಸೇರಿದ ಪಾಳು ಬಿಟ್ಟಿದ್ದ ಸುಮಾರು 15 ಎಕರೆ ಭತ್ತದ ಗದ್ದೆಯನ್ನು ಮತ್ರಂಡ ಪ್ರವೀಣ್ ಕುಶಾಲಪ್ಪ ಅವರು ಗುತ್ತಿಗೆಗೆ ಪಡೆದು, ಮಂಡ್ಯದ ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ಅಲ್ಲಿಯೇ ಮಡಿ ಮಾಡಿದ್ದ ಆರ್‌ಎನ್‌ಆರ್ ಎಂಬ ಭತ್ತದ ಸಸಿ ಮಡಿಗಳನ್ನು ಹಾಗೂ ಭತ್ತದ ನಾಟಿ ಮಾಡುವ ಯಂತ್ರವನ್ನು ತರಿಸಿ ಭತ್ತದ ನಾಟಿ ಮಾಡುತ್ತಿದ್ದಾರೆ. ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿದ ಕೃಷಿ ತಜ್ಞರು, ಯಂತ್ರದ ಮೂಲಕ ಭತ್ತದ ನಾಟಿಕಾರ್ಯ ಮಾಡುವ ಮೂಲಕ ಪಾಳುಬಿಟ್ಟಿದ್ದ ಭತ್ತದ ಗದ್ದೆಗೆ ಮರುಜೀವ ನೀಡುತ್ತಿರುವ ಕೃಷಿಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಆರ್.ಎನ್.ಕೆಂಚರೆಡ್ಡಿ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಭತ್ತದ ಕೃಷಿ ಬಹಳ ಕಡಿಮೆಯಾಗಿದೆ. ಕಾರ್ಮಿಕರ ಸಮಸ್ಯೆ ಬಗೆಹರಿಸಲು ಯಂತ್ರೀಕೃತ ಕೃಷಿ ಮೊರೆ ಹೋಗುವುದರಿಂದ ಭತ್ತದ ಬೇಸಾಯದ ಖರ್ಚು ವೆಚ್ಚ ಕಡಿಮೆಯಾಗುತ್ತದೆ. ಭತ್ತದ ಕೃಷಿ ಕೇವಲ ಆಹಾರಕ್ಕಾಗಿ ಅಲ್ಲದೆ ಜಲಮೂಲಗಳ ಸಂರಕ್ಷಣೆಗಾಗಿಯೂ ಮಾಡಬೇಕಾಗಿದೆ ಎಂದರು.
ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣಾ ತಜ್ಞ ಡಾ.ವೀರೇಂದ್ರ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ಭತ್ತದ ಬೆಳೆ ಬೆಳೆಯುವುದು ಕಡಿಮೆಯಾಗಿದೆ. ಯಾಂತ್ರೀಕೃತ ಕೃಷಿ ಮೂಲಕ ಆರ್‌ಎನ್‌ಆರ್ ಎಂಬ ಭತ್ತದ ತಳಿಯನ್ನು ಹೊಸದಾಗಿ ತಂದು ನಾಟಿ ಮಾಡಿಸುತ್ತಿದ್ದಾರೆ. ಈ ತಳಿಯನ್ನು ತೆಲಂಗಾಣ ಸೋನಾ ಎಂದು ಕೂಡ ಕರೆಯುತ್ತಾರೆ. ಸೋನಾ ಮಸೂರಿ ಅಕ್ಕಿಯಂತೆ ಇರುವ ಈ ತಳಿಯು ಬೆಂಕಿ ರೋಗ ತಡೆಯುವ ಸಾಮರ್ಥ್ಯ ಹೊಂದಿದ್ದು 115 ರಿಂದ 120 ದಿನಗಳಲ್ಲಿ ಬೆಳೆಯುತ್ತದೆ ಎಂದು ಮಾಹಿತಿ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಡಾ.ಚಂದ್ರಶೇಖರ ಮಾತನಾಡಿ, ಹತ್ತು ವರ್ಷಗಳ ಹಿಂದೆ ಜಿಲ್ಲೆಯಲ್ಲಿ 50 ಹೆಕ್ಟೇರ್ ಭತ್ತದ ಕೃಷಿ ಕಾಣಸಿಗುತ್ತಿತ್ತು. 5 ವರ್ಷಗಳಿಂದ ಕೇವಲ 20 ರಿಂದ 30 ಹೆಕ್ಟೇರ್ ಭತ್ತದ ಕೃಷಿ ಭೂಮಿ ಕಾಣಸಿಗುತ್ತಿದೆ. ಕೃಷಿ ವಿಜ್ಞಾನ ಕೇಂದ್ರ, ಅರಣ್ಯ ಮಹಾವಿದ್ಯಾಲಯ ಒಟ್ಟಾಗಿ ಸುಮಾರು 200 ಹೆಕ್ಟೇರ್ ಭತ್ತ ಬೆಳೆಯುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಕೃಷಿಕ ಮತ್ರಂಡ ಪ್ರವೀಣ್ ಕುಶಾಲಪ್ಪ ತಮ್ಮ ಅನುಭವ ಹಂಚಿಕೊಂಡರು. ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಲಯ ಕೃಷಿ ಸಂಶೋಧನ ಕೇಂದ್ರದ ಕ್ರಿಯಾಬದ್ಧ ತಳಿ ವಿಜ್ಞಾನಿ ಎಚ್.ವಿ.ಮನೋಜ್ ಕುಮಾರ್, ಮಲಚೀರ ರವಿ, ಮುತ್ತಪ್ಪ, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಪ್ರಾಧ್ಯಾಪಕ ನಾಣಯ್ಯ, ಡಾ.ಪ್ರಶಾಂತ್, ಡಾ.ನಿಂಗರಾಜ್ ದಳವಾಯಿ, ಡಾ.ಜಡೇಗೌಡ, ಉಪ ಕೃಷಿ ನಿರ್ದೇಶಕ ಡಾ.ಸೋಮಶೇಖರ್, ಸಹಾಯಕ ಕೃಷಿ ನಿರ್ದೇಶಕರಾದ ನಾಗೇಂದ್ರ, ಪರಮೇಶ್, ಕೃಷಿ ಅಧಿಕಾರಿ ಮೀರಾ, ಪೃಥ್ವಿ, ಮಂಡ್ಯ ಕೃಷಿ ವಿಶ್ವವಿದ್ಯಾಲಯದ ನಿರ್ದೇಶಕ ಸಂಕೇತ್ ಅಶೋಕ್, ಯಂತ್ರ ಚಾಲಕ ಮಹೇಶ್, ಚಂದನ್, ಪ್ರಮೋದ್, ಶಶಾಂಕ್ ಇದ್ದರು.