ಪಾಲಿನ ನಿರೀಕ್ಷೆಯಲ್ಲಿ ವಿಎಫ್​ಸಿಗಳು

7sirsi1
Published on

ಶಿರಸಿ: ಸ್ವಾಭಾವಿಕ ಅರಣ್ಯ ಪ್ರದೇಶದಲ್ಲಿ ಬೆಳೆದ ಬೆಲೆಬಾಳುವ ಮರಗಳಿಂದ ಬರುವ ಉತ್ಪನ್ನದಲ್ಲಿ ಗ್ರಾಮ ಅರಣ್ಯ ಸಮಿತಿ (ವಿಎಫ್​ಸಿ)ಗಳಿಗೆ ಲಾಭಾಂಶ ನೀಡಲು ನಾಲ್ಕೂವರೆ ವರ್ಷಗಳ ಹಿಂದೆ ಸರ್ಕಾರ ಕೈಗೊಂಡಿದ್ದ ತೀರ್ಮಾನ ಇನ್ನೂ ಅನುಷ್ಠಾನವಾಗಿಲ್ಲ. ಈ ಹಿನ್ನೆಲೆಯಲ್ಲಿ ಹಲವು ವಿಎಫ್​ಸಿಗಳು ಇಂದು ನಿಷ್ಕ್ರಿಯವಾಗುತ್ತಿವೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಕ್ರಿಯವಾಗಿರುವ ವಿಎಫ್​ಸಿಗಳು ಬೆಂಕಿಯಿಂದ ಕಾಡನ್ನು ರಕ್ಷಿಸಲು, ವನ್ಯಜೀವಿ ಹಾವಳಿ ತಡೆಯಲು, ಕಾಡಿನ ಉತ್ಪನ್ನ ಅಕ್ರಮವಾಗಿ ಸಾಗಾಟ ಮಾಡದಂತೆ ಸಂರಕ್ಷಿಸಲು ಇಲಾಖೆಗೆ ಸಹಕಾರ ನೀಡುತ್ತವೆ. ವಿಎಫ್​ಸಿಗಳ ನೆರವಿನಿಂದಾಗಿ ಕಳೆದ ವರ್ಷ ಬೇಸಿಗೆಯಲ್ಲಿ ಅನೇಕ ವಲಯಗಳಲ್ಲಿ ಕಾಡಿಗೆ ಬೆಂಕಿ ಬೀಳುವ ಪ್ರಕರಣ ಕಡಿಮೆಯಾಗಿದೆ. ಆದರೆ, ಇಲಾಖೆಗೆ ನೆರವು ನೀಡುತ್ತಿರುವ ಸಮಿತಿಗಳು ಬೆಲೆಬಾಳುವ ಮರಗಳಾದ ಬೀಟೆ, ತೇಗ, ಹೊನ್ನೆ, ಮತ್ತಿ ಮತ್ತು ನಂದಿ ಮರಗಳಿಂದ ಬರುವ ಉತ್ಪನ್ನಗಳಿಂದ ವಂಚಿತವಾಗಿವೆ. ವಿಎಫ್​ಸಿ ರಚನೆಗೆ ಮೊದಲು ಸ್ವಾಭಾವಿಕವಾಗಿ ಬೆಳೆದ ಉಳಿದ ಜಾತಿಯ ಮರಗಳಿಂದ ಬರುವ ಉತ್ಪನ್ನದಲ್ಲಿ ಶೇ. 50:50ರ ಅನುಪಾತದಲ್ಲಿ ಸರ್ಕಾರ ಮತ್ತು ವಿಎಫ್​ಸಿಗಳಿಗೆ ಲಾಭಾಂಶ ಹಂಚಿಕೆಯಾಗುತ್ತಿದೆ.

ಕಾಡಿನ ಎಲ್ಲ ಮರಗಳ ಮಾರಾಟದಿಂದ ಬರುವ ಆದಾಯದಲ್ಲಿ ವಿಎಫ್​ಸಿಗಳಿಗೆ ಪಾಲು ನೀಡಬೇಕು ಎಂಬುದು ಬಹುವರ್ಷಗಳ ಬೇಡಿಕೆಯಾಗಿದೆ. ಈ ಸಂಬಂಧ ರ್ಚಚಿಸಲು 2015ರ ಜೂನ್ 22ರಂದು ಅಂದಿನ ಅರಣ್ಯ ಸಚಿವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಸಭೆ ನಡೆದಿತ್ತು. ಆಗಿನ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ, ಸ್ಥಳೀಯ ಶಾಸಕರು, ಅರಣ್ಯ ಅಧಿಕಾರಿಗಳನ್ನು ಒಳಗೊಂಡ ಸಭೆಯಲ್ಲಿ ‘ಹೊರತುಪಡಿಸಿದ ಮರಗಳ’ ವಿಷಯವನ್ನು ತೆಗೆದು ಹಾಕಿ, ಎಲ್ಲ ಮರಗಳ ಮಾರಾಟದಿಂದ ಬರುವ ಆದಾಯದ ಪಾಲನ್ನು ವಿಎಫ್​ಸಿಗೆ ವಿತರಿಸಲು, ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು ಸಮ್ಮತಿಸಿದ್ದರು. ಅಲ್ಲದೇ, 2002ರ ಆದೇಶದಲ್ಲಿದ್ದ ಈ ‘ಹೊರತುಪಡಿಸಿದ ಮರಗಳ’ ವಿಷಯಕ್ಕೆ ತಿದ್ದುಪಡಿ ತರಬೇಕೆಂದು ಸಹ ತೀರ್ವನಿಸಲಾಗಿತ್ತು. ಆದರೆ, ಸರ್ಕಾರಗಳು ಬದಲಾಗಿ ಸಚಿವರು ಬದಲಾದರೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ವಿಎಫ್​ಸಿಗಳಿಗೆ ಲಾಭಾಂಶ ದೊರೆತರೆ, ಊರಿನ ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಪ್ರಸ್ತುತ ಅಕೇಶಿಯಾ ನೆಡುತೋಪಿನ ಲಾಭಾಂಶದಲ್ಲಿ ಮಾತ್ರ ಪಾಲು ಸಿಗುತ್ತಿದೆ. ಸಾಕಷ್ಟು ವಿಎಫ್​ಸಿಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವುದರಿಂದ ಮತ್ತು ಅರಣ್ಯ ರಕ್ಷಣೆಯಲ್ಲಿ ಕಾಳಜಿ ವಹಿಸುವುದರಿಂದ ಸರ್ಕಾರ ಶೀಘ್ರವಾಗಿ ಎಲ್ಲ ಮರಗಳ ಆದಾಯದಿಂದ ಬರುವ ಲಾಭಾಂಶ ಹಂಚುವಂತೆ ಆದೇಶ ಮಾಡಬೇಕಿದೆ ಎಂಬುದು ವಿಎಫ್​ಸಿ ಪ್ರಮುಖರ ಅಭಿಪ್ರಾಯ.

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ವಿಎಫ್​ಸಿ ಇದ್ದು, ಹೆಚ್ಚಿನ ಆದಾಯ ನಿರೀಕ್ಷಿಸುತ್ತಿವೆ. ಪ್ರಸ್ತುತ ಸ್ವಾಭಾವಿಕವಾಗಿ ಬೆಳೆದ ಕೆಳ ದರ್ಜೆಯ ಮರಗಳಿಂದ ಬರುವ ಉತ್ಪನ್ನದಲ್ಲಿ ಅರ್ಧ ಪಾಲು ಮಾತ್ರ ನೀಡಲಾಗುತ್ತಿದ್ದು, ಗ್ರಾಮದ ಅಭಿವೃದ್ಧಿಗೆ ಸಾಕಾಗುತ್ತಿಲ್ಲ. ನಾಲ್ಕೂವರೆ ವರ್ಷಗಳಿಂದ ಸರ್ಕಾರ ಹೊಸ ನಿಯಮ ಜಾರಿಗೆ ತರುತ್ತದೆ ಎಂದು ಕಾದು ಕುಳಿತ ಹಲವು ವಿಎಫ್​ಸಿಗಳು ಇಂದು ನಿರಾಶೆಯಿಂದ ತಮ್ಮ ಕ್ರಿಯಾಶೀಲತೆ ಕಳೆದುಕೊಳ್ಳುತ್ತಿವೆ.| ಸತೀಶ ಭಟ್ಟ, ಖೂರ್ಸೆ ವಿಎಫ್​ಸಿ ಅಧ್ಯಕ್ಷ

ಸ್ವಾಭಾವಿಕ ಅರಣ್ಯದಲ್ಲಿ ಬೆಳೆದ ಬೆಲೆಬಾಳುವ ಮರಗಳಿಂದ ಬರುವ ಉತ್ಪನ್ನದಲ್ಲಿ ಗ್ರಾಮ ಅರಣ್ಯ ಸಮಿತಿಗಳಿಗೆ ಲಾಭಾಂಶ ನೀಡುವ ಸಂಬಂಧ ಈ ಹಿಂದೆಯೇ ಕೆನರಾ ವೃತ್ತದಿಂದ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗ ಮತ್ತೊಮ್ಮೆ ಡಿಸೆಂಬರ್​ನಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ಗಮನ ಸೆಳೆಯಲಾಗಿದೆ. ಸದ್ಯದಲ್ಲಿ ಆದೇಶ ಬರುವ ನಿರೀಕ್ಷೆಯಿದೆ.| ಡಿ. ಯತೀಶಕುಮಾರ್, ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net