

ಕಲಬುರಗಿ: ನಗರದ ಮಹಾನಗರ ಪಾಲಿಕೆಯ ಮೂರು ವಲಯ ಕಚೇರಿಗಳಲ್ಲಿ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ವ್ಯವಸ್ಥೆ, ಆಡಳಿತವನ್ನು ಪರಿಶೀಲಿಸಿ, ಅಶಿಸ್ತು, ವಿಳಂಬ ಧೋರಣೆ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಪಾಲಿಕೆ ಕಚೇರಿ ಒಳಗೆ ಗುಟ್ಕಾ ತಿಂದು ಉಗುಳಿರುವುದು, ದುರ್ವಾಸನೆ ಬೀರಿದ್ದು, ಕಡತಗಳು ಧೂಳು ಹಿಡಿದಿವೆ. ರಾಶಿ, ರಾಶಿ ಕಸ ಸಂಗ್ರಹವಾಗಿರುವುದನ್ನು ಕಂಡು ಸಿಡಿಮಿಡಿಗೊಂಡ ಡಿವೈಎಸ್‌ಪಿ ಗೀತಾ ಬೇನಾಳ, ಇಡೀ ನಗರವನ್ನು ಸ್ವಚ್ಛವಾಗಿಡಬೇಕಾದ ಪಾಲಿಕೆ ಕಚೇರಿಯ ಇಷ್ಟು ಅಸ್ವಚ್ಛತೆಯಿಂದ ಕೂಡಿದರೆ ಹೇಗೆ ಎಂದು ಸಿಡಿಮಿಡಿಗೊಂಡರು.
ಪಾಲಿಕೆಯ ವಲಯ ಒಂದು, ಎರಡು, ಮೂರು ಕಚೇರಿಗಳಲ್ಲಿನ ಕಂಪ್ಯೂಟರ್‌ನಲ್ಲಿನ ಕಡತಗಳನ್ನು, ಚಲನ ವಲನ ರಿಜಿಸ್ಟರ್, ಹಾಜರಿ ಪುಸ್ತಕ, ಕ್ಯಾಶ ರಿಜಿಸ್ಟರ್ ಪರಿಶೀಲಿಸಿದರು. ಸಿಬ್ಬಂದಿ, ಅಧಿಕಾರಿಗಳು ಕಚೇರಿಯಲ್ಲಿ ಇರದಿರುವುದು ಕಂಡು, ದುರ್ವಾಸನೆ ಕುರಿತು ತರಾಟೆಗೆ ತೆಗೆದುಕೊಂಡರು.
ಪದೇ ಪದೆ ಅಲೆದಾಡಿಸುತ್ತಾರೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ಕೂಡಲೇ ಈ ಪದ್ಧತಿಗೆ ತಿಲಾಂಜಲಿ ಇಟ್ಟು, ಸಾರ್ವಜನಿಕರ ಅರ್ಜಿಗೆ ತಕ್ಷಣ ಸ್ಪಂದಿಸಬೇಕು. ಒಂದು ಅರ್ಜಿ ತಿಂಗಳುಗಳ ಕಾಲ ಹಿಡಿದುಕೊಂಡು ತಿರುಗಾಡಿಸುತ್ತಾರೆ ಎಂದು ಸಾರ್ವಜನಿಕರು ಅಧಿಕಾರಿಗಳ ಎದುರೇ ದೂರಿದರು. ಬಡವರಿಂದ ಲಂಚ ಸ್ವೀಕರಿಸಿ ಕೆಲಸ ಮಾಡಿದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಲೋಕಾ ಎಸ್‌ಪಿ ಬಿ.ಕೆ.ಉಮೇಶ ಮಾರ್ಗದರ್ಶನದಲ್ಲಿ ಲೋಕಾ ಅಧಿಕಾರಿಗಳಾದ ಅರುಣಕುಮಾರ, ಅಕ್ಕಮಹಾದೇವಿ, ರಾಜಶೇಖರ, ಪ್ರದೀಪ, ಸಂತೋಷಮ್ಮ. ಬಸವರಾಜ, ಮಲ್ಲಿನಾಥ, ಗೌಡಪ್ಪ, ಪ್ರಮೋದ ಇತರರಿದ್ದರು.