ಪಾಲಕರ ಸಹಕಾರವಿದ್ದರೆ ಮಾತ್ರ ಮಕ್ಕಳು ಕ್ರೀಡೆಯಲ್ಲಿ ಉನ್ನತಿ

31.npk-2
Published on

ನಾಪೋಕ್ಲು: ಪಾಲಕರ ಸಹಕಾರವಿದ್ದರೆ ಮಾತ್ರ ಮಕ್ಕಳು ಕ್ರೀಡೆಯಲ್ಲಿ ಮುಂದೆ ಬಂದು ಉನ್ನತಿ ಹೊಂದಲು ಸಾಧ್ಯ ಎಂದು ಹಿರಿಯ ಕ್ರೀಡಾಪಟು ಅರೆಯಡ ಗಣೇಶ್ ಬೆಳ್ಯಪ್ಪ ಅಭಿಪ್ರಾಯಪಟ್ಟರು.


ಇಲ್ಲಿನ ಭಗವತಿ ಯುವಕ ಸಂಘದ ವತಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆಯ ಆಟದ ಮೈದಾನದಲ್ಲಿ ಕೈಲ್ ಮುಹೂರ್ತ ಹಬ್ಬದ ಕ್ರೀಡಾಕೂಟದ ಸಮಾರಂಭದಲ್ಲಿ ಅವರು ಮಾತನಾಡಿದರು.


ಕ್ರೀಡೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಬಹುಮಾನ ಸಿಗುವುದಿಲ್ಲ. ಆದರೆ, ನಿರಂತರ ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆ ಮುಖ್ಯ ಎಂದ ಅವರು, ಇಂತಹ ಕ್ರೀಡಾಕೂಟದಿಂದ ಗ್ರಾಮೀಣ ಮಕ್ಕಳ ಪ್ರತಿಭೆ ಹೊರಹೊಮ್ಮಲು ಸಾಧ್ಯ ಎಂದರು.


ನಿವೃತ್ತ ಉದ್ಯೋಗಿ ನಾಟೋಳಂಡ ರಮೇಶ್ ಭೀಮಯ್ಯ ಮಾತನಾಡಿ, ಮಾನಸಿಕ, ಶಾರೀರಿಕವಾಗಿ ಸದೃಢರಾಗಲು ಕ್ರೀಡೆ ಅವಶ್ಯಕ. ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವಂತಾಗಲು ತಂದೆ-ತಾಯಿಯರ ಜವಾಬ್ದಾರಿ ಮುಖ್ಯ ಎಂದರು.


ಗ್ರಾಮ ಪಂಚಾಯಿತಿ ಸದಸ್ಯ ಕುಲ್ಲೇಟಿರ ಅರುಣ್ ಬೇಬ ಮಾತನಾಡಿ, ಶಾಲೆಯ ಆಟದ ಮೈದಾನದಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡು ಹಲವು ಕ್ರೀಡಾಪಟುಗಳು ಹೊರಹೊಮ್ಮಿದ್ದಾರೆ. ಎಲ್ಲರೂ ಒಗ್ಗೂಡಲು ಕ್ರೀಡೆ ಸಹಕಾರಿ ಎಂದರು.


ಭಗವತಿ ಯುವಕ ಸಂಘದ ಅಧ್ಯಕ್ಷ ಕುಲ್ಲೇಟಿರ ದೇವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದ ಅಂಗವಾಗಿ ಮಕ್ಕಳಿಗೆ, ಮಹಿಳೆಯರಿಗೆ, ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿತ್ತು.


ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದವರಿಗೆ ವೇದಿಕೆಯಲ್ಲಿದ್ದ ದ್ದ ಗಣ್ಯರು ಬಹುಮಾನಗಳನ್ನು ವಿತರಿಸಿ ಶುಭ ಹಾರೈಸಿದರು.


ರಾಜ್ಯ ಎಫೆಕ್ಸ್ ಬ್ಯಾಂಕ್ ನಿವೃತ್ತ ಅಧಿಕಾರಿ ಬೊಪ್ಪೆರ ಜಯಉತ್ತಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ಆರ್‌ಎಂಸಿ ಮಾಜಿ ಅಧ್ಯಕ್ಷ ಶಿವಚಾಳಿಯಂಡ ಅಂಬಿಕಾರಿಯಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಶಿವಚಾಳಿಯಂಡ ಜಗದೀಶ್, ವಿಎಸ್ ಎಸ್‌ಎನ್ ಮಾಜಿ ನಿರ್ದೇಶಕ ಕೆಲೇಟಿರ ಸಾಬು ನಾಣಯ್ಯ, ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ವಿಜು ಪೂವಯ್ಯ, ಶಿವಚಾಳಿಯಂಡ ಸುಭಾಷ್ ನಾಣಯ್ಯ, ಭಗವತಿ ಸಂಘದ ಕಾರ್ಯದರ್ಶಿ ಶಿವಾಚಾಳಿಯಂಡ ಕಿಶೋರ್ ಬೋಪಣ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net